
ಕಾರ್ಕಳ, ಜೂ.22: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪನೆಗೊಂಡಿದ್ದ ‘ಯಕ್ಷರಂಗಾಯಣ’ ಕೇಂದ್ರದ ಹೆಸರನ್ನು ರಾಜ್ಯ ಸರ್ಕಾರವು ಏಕಾಏಕಿ ‘ಕರಾವಳಿ ರಂಗಾಯಣ’ ಎಂದು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕ ಪಕ್ಷೀಯ ನಿರ್ಧಾರ ಎಂದು ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿಖ್ಯಾತ ಯಕ್ಷಗಾನ ಮತ್ತು ನಾಟಕರಂಗದ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ದೂರದೃಷ್ಟಿಯೊಂದಿಗೆ ಕಾರ್ಕಳದಲ್ಲಿ ಯಕ್ಷರಂಗಾಯಣ ಸ್ಥಾಪನೆ ಮಾಡಲಾಗಿತ್ತು.
ಹೆಸರು ಬದಲಿಸುವ ಈ ದಿಢೀರ್ ನಿರ್ಧಾರ ದುರುದ್ದೇಶಪೂರಿತ ನಡೆಯಾಗಿದೆ. ಇಡೀ ಕರಾವಳಿಯ ಯಕ್ಷಗಾನ ಕಲೆಗೆ, ರಂಗಭೂಮಿಗೆ ಹಾಗೂ ಹಗಲಿರುಳು ಈ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಇದು ಯಕ್ಷಗಾನ ಕಲೆಯ ಕತ್ತು ಹಿಸುಕುವ ರಾಜ್ಯ ಸರಕಾರದ ವ್ಯವಸ್ಥಿತ ಸಂಚು ಎಂದವರು ಆರೋಪಿಸಿದ್ದಾರೆ.
ಬಿಜೆಪಿ ಸರಕಾರದ ಆಡಳಿತದಲ್ಲಿ ನಾನು ಕನ್ನಡ ಮತ್ತು ಸಂಸ್ಕ್ರತಿ ಸಚಿವನಾಗಿದ್ದಾಗ ಇಡೀ ಅವಿಭಜಿತ ಜಿಲ್ಲೆಯ ಅಸ್ಮಿತೆಯಾದ ಯಕ್ಷಗಾನ ಕಲೆಯನ್ನು ಯಕ್ಷಗಾನದ ಹೆಸರಲ್ಲೇ ಯುವ ಜನಾಂಗಕ್ಕೆ ಪರಿಚಯಿಸಬೇಕು ಆಶಯದಿಂದ ಆರಂಭಿಸಲಾಗಿತ್ತು. ಆ ಬಳಿಕ ಈ ಕೇಂದ್ರದಲ್ಲಿ ನಿರಂತರ ಯಕ್ಷಗಾನ, ನಾಟಕ ಕಲೆಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಯುವ ಸಮೂಹ ಯಕ್ಷಗಾನ, ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು.
ಯಕ್ಷ ರಂಗಾಯಣದ ಕಟ್ಟಡ ನಿರ್ಮಾಣ ಇತ್ಯಾದಿಗಳಿಗೆ ಸುಮಾರು 2 ಕೋಟಿ ರೂ ಹಣ ಮಂಜೂರಾಗಿ ಯಕ್ಷರಂಗಾಯಣ ಹೆಸರಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಆದರೆ, ಇವತ್ತು ಆ ಹೆಸರಿನಿಂದ ‘ಯಕ್ಷ’ ಎಂಬ ಪದವನ್ನೇ ಕಿತ್ತೊಗೆಯುವ ಮೂಲಕ ಸರಕಾರ ಯಾರ ಓಲೈಕೆಗೆ ನಿಂತಿದೆ? ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ‘ಯಕ್ಷಗಾನ’ದ ಹೆಸರನ್ನು ಸಾಂಸ್ಕೃತಿಕ ಭೂಪಟದಿಂದಲೇ ಅಳಿಸಿ ಹಾಕಲು ಹೊರಟಿರುವ ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ? ಕಲೆಯ ಹೆಸರನ್ನು ಬದಲಿಸಲು ಸರಕಾರಕ್ಕೆ ಒತ್ತಡ ಹೇರಿದ ಆ ಅದೃಶ್ಯ ಶಕ್ತಿಗಳು ಯಾವುವು? ಎಂದವರು ಪ್ರಶ್ನಿಸಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ನಾಡಿನ ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗಿತ್ತು. ಯಕ್ಷಗಾನ ಸಮಾವೇಶ ಮೇಳ, ಹೀಗೆ ಹಲವು ವಿಧದ ಕಾರ್ಯಕ್ರಮ ಕೈಗೊಂಡು ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಲಾಗಿತ್ತು. ಆದರೇ ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಲೆಗೆ ಒಂದಲ್ಲ ಒಂದು ರೀತಿ ದ್ರೋಹ ಬಗೆಯುವ ಪ್ರಯತ್ನ ನಡೆಸುತ್ತಿದೆ. ಯಕ್ಷಗಾನ ಕಲೆಯನ್ನು ಕೂಡ ಈ ಸರಕಾರಕ್ಕೆ ಸಹಿಸಲಾಗುತ್ತಿಲ್ಲವೇ?
ಎಂದು ಪ್ರಶ್ನಿಸಿರುವ ಅವರು
ಕರಾವಳಿ ರಂಗಾಯಣ ಎಂದು ಹೆಸರು ಬದಲಿಸುವ ನಿರ್ಧಾರಕ್ಕೆ ಮುನ್ನ ಕರಾವಳಿ ಭಾಗದವರ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ, ಯಾರ ಗಮನಕ್ಕೂ ತಾರದೇ, ಸ್ಥಳಿಯರ ವಿಶ್ವಾಸ ಗಳಿಸದೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದವರು ಆರೋಪಿಸಿದ್ದಾರೆ.
ಯಕ್ಷಗಾನ ಎಂಬುದು ಕೇವಲ ಒಂದು ಪ್ರದರ್ಶನ ಕಲೆಯಲ್ಲ. ಅದು ಕರಾವಳಿಯ ರಕ್ತಗತವಾಗಿ ಬಂದಿರುವ ಭಾವುಕ ಸಾಂಸ್ಕೃತಿಕ ಅಸ್ಮಿತೆ. ಇಂತಹ ಕಲೆಯ ಗೌರವಕ್ಕೆ ಧಕ್ಕೆ ತಂದಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರವು ತನ್ನ ಈ ಹಠಮಾರಿ ಮತ್ತು ವಿವೇಚನಾರಹಿತ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ರಾಜಕೀಯ ದುರುದ್ದೇಶಗಳನ್ನು ಬದಿಗಿಟ್ಟು, ಕೇಂದ್ರಕ್ಕೆ ‘ಯಕ್ಷರಂಗಾಯಣ’ ಎಂಬ ಮೂಲ ಹೆಸರನ್ನೇ ಉಳಿಸಬೇಕು. ಸರ್ಕಾರ ಒಂದು ವೇಳೆ ತನ್ನ ಪಟ್ಟನ್ನು ಸಡಿಲಿಸದೆ ಹೋದರೆ, ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಯಕ್ಷಗಾನ ಅಭಿಮಾನಿಗಳ ಮೇಳಗಳ ಕಲಾವಿದರು ಹಾಗೂ ರಂಗದ ದಿಗ್ಗಜರ ತೀವ್ರ ವಿರೋಧವನ್ನು ಎದುರಿಸಬೇಕಾದಿತು ಎಂದು ಸುನಿಲ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
