
ಮಂಗಳೂರು, ಜೂ.27: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ವಿಠ್ಠಲ ಗೌಡನಿಗೆ ಬೆಂಗಳೂರಿನ ನ್ಯಾಯಾಲಯವು ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ನ್ಯಾಯಾಂಗ ನಿಂದನೆ ಪ್ರಕರಣದಡಿಯಲ್ಲಿ ಈ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಸದ್ಯ ವಿಠ್ಠಲ್ ಗೌಡ ಪತ್ತೆಗಾಗಿ ಪೊಲೀಸರು ಹಾಗೂ ಕೋರ್ಟ್ ಅಧಿಕಾರಿಗಳು ತೀವೃ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 8 ರಂದೇ ವಾರಂಟ್ ಜಾರಿಗೊಳಿಸಿದ್ದು, ಜೂನ್ 30 ರೊಳಗೆ ವಿಠ್ಠಲ್ ಗೌಡನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.ನ್ಯಾಯಾಲಯದ ಅರೆಸ್ಟ್ ವಾರಂಟ್ ಕೈಸೇರುತ್ತಿದ್ದಂತೆ ಕಾನೂನು ಕ್ರಮಕ್ಕೆ ಹೆದರಿ ವಿಠ್ಠಲ್ ಗೌಡ ತಲೆಮರೆಸಿಕೊಂಡಿದ್ದು,ಬೆಂಗಳೂರಿನಿಂದ ಆಗಮಿಸಿರುವ ಕೋರ್ಟ್ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಅವಹೇಳನಕಾರಿ ಹಾಗೂ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು ಎಂದು ಈ ಹಿಂದೆ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಆದರೆ, ವಿಠ್ಠಲ್ ಗೌಡ ನ್ಯಾಯಾಲಯದ ಅಧಿಕೃತ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಮತ್ತೆ ಅವಹೇಳಕಾರಿ ಹೇಳಿಕೆಯನ್ನು ನೀಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿಯಲ್ಲಿ ಆತನನ್ನು ಬಂಧಿಸಿ ಜೂನ್ 30 ರೊಳಗೆ ಕೋರ್ಟ್‌ಗೆ ಒಪ್ಪಿಸುವಂತೆ ಖಡಕ್ ಆದೇಶ ಹೊರಡಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
