
ಕಾರ್ಕಳ, ಜೂ. 29: ರಂಗ ಸಮಾಜದ ಸರ್ವಾನುಮತದ ಶಿಫಾರಸಿನ ಮೇರೆಗೆ ಸರ್ಕಾರವು ಕಾರ್ಕಳ ಯಕ್ಷ ರಂಗಾಯಣದ ಹೆಸರನ್ನು ಕರಾವಳಿ ರಂಗಾಯಣ ಕಾರ್ಕಳ ಎಂದು ಬದಲಾವಣೆ ಮಾಡಿದೆ.ಹೆಸರು ಬದಲಾದ ಮಾತ್ರಕ್ಕೆ ರಂಗಭೂಮಿಯ ಸ್ವರೂಪ ಬದಲಾಗದು ಎಂದು ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಹೇಳಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಾಯಣವು ನಾಟಕ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಸಂಸ್ಥೆಯಾಗಿದ್ದು, ಯಕ್ಷಗಾನ ಮತ್ತು ರಂಗಾಯಣದ ಕಾರ್ಯವ್ಯಾಪ್ತಿ ವಿಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿದರು.
ಯಕ್ಷಗಾನವು ಕರಾವಳಿಯ ಸಾಂಸ್ಕೃತಿಕ ಅಸ್ಮಿತೆಯಾಗಿದ್ದು, ಅದರ ಅಭಿವೃದ್ಧಿಗಾಗಿ ಯಕ್ಷಗಾನ ಅಕಾಡೆಮಿ, ಯಕ್ಷಗಾನ ತರಬೇತಿ ಕೇಂದ್ರ ಸೇರಿದಂತೆ ಪ್ರತ್ಯೇಕ ಸಂಸ್ಥೆಗಳಿವೆ. ಆದರೆ ರಂಗಭೂಮಿಯ ಬೆಳವಣಿಗೆಗಾಗಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು.
ರಂಗ ಸಮಾಜದಲ್ಲಿ ಕರಾವಳಿ ಭಾಗದ ರಂಗಕರ್ಮಿಗಳು, ಚಲನಚಿತ್ರ ನಟರು, ಸಾಹಿತಿಗಳು ಹಾಗೂ ವಿದ್ವಾಂಸರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರು ಸಮಗ್ರ ಚರ್ಚೆ ನಡೆಸಿ “ಕರಾವಳಿ ರಂಗಾಯಣ” ಎಂಬ ಹೆಸರನ್ನು ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದರು.
1993ರ ರಂಗಾಯಣ ಬೈಲಾದಲ್ಲಿಯೂ “ಕರಾವಳಿ ರಂಗಾಯಣ” ಎಂಬ ಹೆಸರಿನ ಉಲ್ಲೇಖ ಇರುವುದನ್ನು ಪರಿಗಣಿಸಿ ಸರ್ಕಾರ ಈ ಬದಲಾವಣೆ ಮಾಡಿದೆ ಎಂದು ವಿವರಿಸಿದರು.
ಕಳೆದ ವರ್ಷ ರಂಗಾಯಣದಿಂದ 70ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಪ್ರಸಕ್ತ ವರ್ಷ ರಂಗಾಯಣ ದ ಚಟುವಟಿಕೆಗಳಿಗಾಗಿ ಸರ್ಕಾರ ₹50 ಲಕ್ಷ ಅನುದಾನ ಮೀಸಲಿಡಲಾಗಿದೆ.
ಕಾರ್ಕಳ ರಂಗಾಯಣದ ಕಾರ್ಯವ್ಯಾಪ್ತಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ವ್ಯಾಪಿಸಿದೆ ಎಂದು ಹೆಮ್ಮೆಯ ವಿಚಾರ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಹಾಗೂ ಸೂರಜ್ ಬಂಗೇರ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
