
ಕಾರ್ಕಳ, ಜೂ.29: ಅಭಿವೃದ್ಧಿ ವಿಚಾರದಲ್ಲಿ ನಿರಂತರವಾಗಿ ಬಡಾಯಿ ಕೊಚ್ಚುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಾರ್ಕಳದ ಅಭಿವೃದ್ಧಿ ಕುರಿತು ಕೊಡುಗೆ ಏನಿದೆ? ಕಾಂಗ್ರೆಸ್ ಸರ್ಕಾರದ ಅನುದಾನ ಬಳಸಿ ಎಲ್ಲವೂ ತನ್ನಿಂದಲೇ ಆಗಿದೆ ಎನ್ನುವ ಶಾಸಕ ಸುನಿಲ್ ಕುಮಾರ್ ಸುಳ್ಳಿನ ಸರದಾರ ,ಸುಳ್ಳಿನ ಸಾಹುಕಾರ್ ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಆರೋಪಿಸಿದ್ದಾರೆ.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪರಶುರಾಮ ಥೀಮ್ ಪಾರ್ಕ್, ಮಾರಿಗುಡಿ ನಿರ್ಮಾಣ ಹಾಗೂ ಕಾರ್ಕಳದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಅಡ್ಡಿಪಡಿಸುವ ಮೂಲಕ ವಿಘ್ನ ಸಂತೋಷಿಗಳು ಎಂದು ಸುನಿಲ್ ಕುಮಾರ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಉದಯ ಶೆಟ್ಟಿ, ಅಭಿವೃದ್ಧಿ ವೇಳೆ ವಿಚಾರದಲ್ಲಿ ಶಾಸಕರು ಜನರಿಗೆ ಸುಳ್ಳು ಹೇಳುತ್ತಲೇ ಬಂದಿದ್ದಾರೆ, ಪರಶುರಾಮ ಥೀಮ್ ಪಾರ್ಕ್ ಕುರಿತಂತೆ ಧಾರ್ಮಿಕ ವಿಚಾರದಲ್ಲಿ ಕಾರ್ಕಳದ ಜನತೆಗೆ ದ್ರೋಹ ಎಸಗಿದ್ದು,ಜನರ ಧಾರ್ಮಿಕ ಭಾವನೆಗಳಿಗೆ ಅಪಚಾರ ಎಸಗಿದ್ದಾರೆ. ಇವರ ಈ ಘನಕಾರ್ಯಕ್ಕೆ ಹೈಕೋರ್ಟ್ ನ್ಯಾಯಾಧೀಶರು ಕೂಡ ಛೀಮಾರಿ ಹಾಕಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಮರುಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ ಎಂದರು.ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಪಡೆದ ಹಣವನ್ನು ವಾಪಾಸು ಮಾಡಿದರೆ ಕಾಮಗಾರಿ ಮತ್ತೆ ಆರಂಭವಾಗುತ್ತದೆ. ಇದಕ್ಕೆ ಶಾಸಕರು ಉತ್ತರಿಸಲಿ ಎಂದರು.
ಪಡುಕುಡೂರು -ಮುನಿಯಾಲು ಸಂಪರ್ಕ ರಸ್ತೆ ಕಾಮಗಾರಿ ನಾನು ನಿಲ್ಲಿಸಿಲ್ಲ,ಈ ಭಾಗದ ಜನ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಸುನಿಲ್ ಕುಮಾರ್ ರಾಜಕೀಯ ಒತ್ತಡ ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಎಣ್ಣೆಹೊಳೆಯ 140 ಕೋ.ರೂ ವೆಚ್ಚದ ಏತ ನೀರಾವರಿ ಯೋಜನೆಯಿಂದ ಕೃಷಿಗೆ ಯಾವುದೇ ಪ್ರಯೋಜನವಾಗದೇ ಸರ್ಕಾರದ ಹಣ ದುರುಪಯೋಗವಾಗಿದೆ ಎಂದರು.
ಕಾರ್ಕಳದ ನರ್ಸಿಂಗ್ ಕಾಲೇಜಿಗೆ ಶಾಸಕರು ನಯಾಪೈಸೆ ಅನುದಾನ ಕೊಟ್ಟಿಲ್ಲ, ಆದರೆ ಕಾಂಗ್ರೆಸ್ ಸರ್ಕಾರವು ಕಾರ್ಕಳದ ಅತ್ತೂರಿನಲ್ಲಿ ಸುಸಜ್ಜಿತ ಕಾಲೇಜು ಸ್ಥಾಪನೆಗೆ ನಿವೇಶನ ಕಾಯ್ದಿರಿಸಲಾಗಿದೆ. ಶೀಘ್ರವೇ ಇದಕ್ಕೆ ಅನುದಾನ ಬಿಡುಗಡೆಯಾಗಲಿದೆ ಎಂದರು.
ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪ ಮಾಡುವ ನೀವು ಬಹಿರಂಗ ಮುಖಾಮುಖಿ ಚರ್ಚೆಗೆ ಬನ್ನಿ,ಇದರಿಂದ ಜನತೆಗೆ ಸತ್ಯ ಏನು ಎಂದು ತಿಳಿಯುತ್ತದೆ ಎಂದು ಉದಯ ಶೆಟ್ಟಿ ಸವಾಲು ಹಾಕಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ,ಇತ್ತೀಚಿನ MLC ಚುನಾವಣೆಯಲ್ಲಿ ಬಿಜೆಪಿ ಜೆಡಿ ಎಸ್ ಅಡ್ಡಮತದಾನ ವಿಚಾರದಲ್ಲಿ ಧರ್ಮಸ್ಥಳದಲ್ಲಿ ಆಣೆಪ್ರಮಾಣ ಪ್ರಸ್ತಾಪಿಸಿದ ವಿಚಾರದಲ್ಲಿ ವಿಜಯೇಂದ್ರ ಧರ್ಮಸ್ಥಳ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಕಳ ಶಾಸಕರು ನಾಪತ್ತೆಯಾಗಿದ್ದರು. ಸುನಿಲ್ ಕುಮಾರ್ ಅವರೇ ಅಡ್ಡಮತದಾನ ಮಾಡಿದ್ದಾರೆ ಎಂದು ಅವರ ಪಕ್ಷದವರೇ ಅನುಮಾನ ವ್ಯಕ್ತಪಡಿಸಿದ್ದರು,ಇದಕ್ಕೆ ಶಾಸಕರು ಉತ್ತರಿಸಬೇಕಿದೆ ಎಂದರು.
ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ತರಾಟೆಗೆ ತೆಗೆದುಕೊಂಡಿದ್ದರು. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಲಾಗಿದೆ. ಇದು ಕ್ರಿಮಿನಲ್ ಅಪರಾಧ ಎಂದು ನ್ಯಾಯಾಧೀಶರು ಹೇಳಿದ್ದಾರೆ ಇದಕ್ಕೆ ಶಾಸಕರು ಉತ್ತರಿಸುತ್ತಾರೆಯೇ? ಶಾಸಕರು ಈ ಕುರಿತು ನೇರವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಕಾರ್ಕಳದ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಜನ ಓಡಾಲು ಸಾಧ್ಯವಿಲ್ಲ, ನಗರದ ರಸ್ತೆಗಳು ಹದಗೆಟ್ಟಿದ್ದು ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂತೋಷ ದೇವಾಡಿಗ,
ಸುರೇಶ್ ಚೇತನಹಳ್ಳಿ, ಅಂಬೇಡ್ಕರ್ ನಿರ್ವಹಣಾ ಸಮಿತಿ ಪ್ರದೀಪ ಬೇಲಾಡಿ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
