
ಉಡುಪಿ,ಜು.07:ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಶಿವಮೊಗ್ಗದ 63 ವರ್ಷದ ರೋಗಿಗೆ ಅತ್ಯಂತ ಅಪೂರ್ವ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮರುಜೀವ ನೀಡಿದ್ದಾರೆ. ರೋಗಿಯ ಎಡ ಮೂತ್ರಪಿಂಡದಿಂದ ಆರಂಭವಾಗಿ, ದೇಹದ ಅತಿದೊಡ್ಡ ರಕ್ತನಾಳದ ಮೂಲಕ ಹೃದಯದ ಬಲ ಹೃತ್ಕರ್ಣದವರೆಗೆ ಹರಡಿದ್ದ ಕ್ಯಾನ್ಸರ್ ಗಡ್ಡೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ತೆರವುಗೊಳಿಸಿದೆ.
ಒಂದು ತಿಂಗಳಿನಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಪರೀಕ್ಷಿಸಿದಾಗ ಅವರ ಎಡ ಮೂತ್ರಪಿಂಡದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಗಿತ್ತು. ಗೆಡ್ಡೆಯು ‘ಟ್ಯೂಮರ್ ಡ್ರಂಬಸ್’ ರೂಪದಲ್ಲಿ ಕೆಳಮಟ್ಟದ ವೆನಾ ಕ್ಯಾವಾ ರಕ್ತನಾಳದ ಮೂಲಕ ಹೃದಯದವರೆಗೂ ವಿಸ್ತರಿಸಿತ್ತು. ಇದು ಮೂತ್ರಪಿಂಡದ ಕ್ಯಾನ್ಸರ್ನ ಅತ್ಯಂತ ಸವಾಲಿನ ಮತ್ತು ಅಪಾಯಕಾರಿ ಹಂತವಾಗಿದೆ.
ಜೂನ್ 17ರಂದು 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರ ಮತ್ತು ಹೃದಯ, ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞರು ಕೈಜೋಡಿಸಿದರು.ರೋಗಿಯ ದೇಹದ ಉಷ್ಣತೆಯನ್ನು 22 ಡಿಗ್ರಿ ಸೆಲ್ಸಿಯಸ್ಗೆ ಇಳಿಸಿ, ರಕ್ತ ಪರಿಚಲನೆಯನ್ನು ಕೆಲಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಅತೀ ಸೂಕ್ಷ್ಮತಂತ್ರವನ್ನು ಬಳಸಲಾಯಿತು. ಈ ಸೀಮಿತ ಅವಧಿಯಲ್ಲೇ ವೈದ್ಯರು ಅತ್ಯಂತ ನಿಖರವಾಗಿ ಹೃದಯ ಮತ್ತು ರಕ್ತನಾಳಗಳಿಂದ ಗಡ್ಡೆಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಚಾವ್ಹಾ, ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ಶ್ರೀನಾಥ್, ಹಿರಿಯ ತಜ್ಞ ವೈದ್ಯರಾದ ಡಾ.ಶ್ಯಾಮ್ ಕೆ.ಅಶೋಕ್ ಹಾಗೂ ಡಾ.ಗಣೇಶ್ ಕಾಮತ್ ನೇತೃತ್ವ ವಹಿಸಿದ್ದರು.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
