

ಬೆಂಗಳೂರು,ಅ.14: ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೇ ಕೇವಲ ದೂರುದಾರರ ಸಾಮಾನ್ಯ ಹಾಗೂ ಅಸ್ಪಷ್ಟ ಆರೋಪಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಆರೋಪಪಟ್ಟಿ ಸಲ್ಲಿಸುವುದು ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ಪ್ರಜೆಗೂ ಖಾತರಿಪಡಿಸಲಾಗಿರುವ ಬದುಕುವ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಂಪೆನಿಯೊಂದರ ಆಂತರಿಕ ವಿವಾದಕ್ಕೆ ಕುರಿತ ಪ್ರಕರಣವೊಂದರಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದ ಪೊಲೀಸರ ನಡೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ವಿನ್ಯಾಸ ಕನ್ಸ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪೊಲೀಸರಿಗೆ ದೂರು ನೀಡಿ, ತಮ್ಮ ಹೆಸರಿನಲ್ಲಿ ನಕಲಿ ರಾಜೀನಾಮೆ ಪತ್ರವನ್ನು ಸೃಷ್ಟಿಸಿ, ತಮ್ಮನ್ನು ನಿರ್ದೇಶಕ ಸ್ಥಾನದಿಂದ ಹೊರಹಾಕಲು ಹಾಗೂ ಆ ಸ್ಥಾನಕ್ಕೆ ತಾವೇ ನೇಮಕಗೊಳ್ಳಲು ನಾಗರಾಜ್ ಮತ್ತು ಇತರರು ಒಳಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಹಾಗೂ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ವಿ. ನಾಗರಾಜ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠವು,ಆರೋಪವನ್ನು ಸಾಬೀತುಪಡಿಸಲು ಅಗತ್ಯವಿದ್ದ ಸೂಕ್ತ ದಾಖಲೆಗಳನ್ನು ತನಿಖಾಧಿಕಾರಿಗಳು ಸಲ್ಲಿಸದ ಕಾರಣ, ಅರ್ಜಿದಾರರ ಮೇಲಿನ ಆರೋಪಗಳಿಗೆ ಪೂರಕ ಸಾಕ್ಷ್ಯಗಳಿಲ್ಲದಿರುವುದನ್ನು ಪುರಸ್ಕರಿಸಿ ಅವರ ವಿರುದ್ಧದ ಎಫ್ಐಆರ್ ಮತ್ತು ಚಾರ್ಜ್ಶೀಟ್ ಅನ್ನು ರದ್ದುಗೊಳಿಸಿ ಆದೇಶಿಸಿದೆ.






.
.
.
.
.
.
.
.
.
.
.
.
.
.
.
.
.
.
.
.
