ಕಾರ್ಕಳ: ಅಜೆಕಾರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಅಜೆಕಾರು ಚರ್ಚ್ ಬಳಿಯ ಮುಖ್ಯರಸ್ತೆಯ ಶಾಲೋಮ್ ಪ್ರಗತಿ ಕಾಂಪ್ಲೆ ಕ್ಸ್ನಲ್ಲಿ ಜು. 14ರಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಸ್ಥೆಗಳು ಪ್ರಾರಂಭವಾಗುವುದು ಉತ್ತಮ ಬೆಳವಣಿಗೆ ಎಂದರು.
ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಮ ಜಿ. ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ,ರಾಷ್ಟ್ರೀಕೃತ ಬ್ಯಾಂಕುಗಳ ಸ್ಪರ್ಧೆಯ ನಡುವೆಯೂ ಸಹಕಾರಿ ಸಂಸ್ಥೆಗಳು ಇಂದಿಗೂ ಗ್ರಾಮೀಣ ಭಾಗದ ಜನರ ವಿಶ್ವಾಸವನ್ನು ಉಳಿಸಿಕೊಂಡಿವೆ.ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿ ಸಂಘಗಳ ಕೊಡುಗೆ ಮಹತ್ತರವಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಭದ್ರತಾ ಕೋಶದ ಉದ್ಘಾಟನೆಯನ್ನು ಕುಕ್ಕುಂದೂರು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ನೆರವೇರಿಸಿ ಮಾತನಾಡಿ,ಆರ್ಥಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯಬೇಕು,ಸಹಕಾರಿ ಸಂಘಗಳು ಜನರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ.ಆರ್ಥಿಕ ವಹಿವಾಟಿನಲ್ಲಿ ಆರೋಗ್ಯಕರ ಸ್ಪರ್ಧೆಯ ಜತೆಗೆ ಗ್ರಾಮೀಣ ಭಾಗದ ಆರ್ಥಿಕತೆ ಬೆಳೆದಾಗ ದೇಶ ಪ್ರಗತಿ ಪಥದಲ್ಲಿ ನಡೆಯಲು ಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸುಜಯ ಶೆಟ್ಟಿ ವಹಿಸಿ ಮಾತನಾಡಿ, ಗ್ರಾಹಕರ ಹಾಗೂ ಅಜೆಕಾರು ಪರಿಸರದ ನಾಗರಿಕರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಈ ಸಂಸ್ಥೆ ಪ್ರಾರಂಭಗೊಂಡಿದೆ. ನಮ್ಮ ಸಂಸ್ಥೆಗೆ ಎಲ್ಲರ ಸಹಕಾರ ಬೇಕು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ವೇ.ಮೂ. ಅರುಣ್ ಭಟ್, ಧರ್ಮಗುರು ಅಬ್ದುಲ್ ಖಾದರ್ ಮುಸ್ಲಿಯಾರ್, ಸುಧಾಕರ ಅಂಚನ್,ಮರ್ಣೆ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ನಾಯಕ್, ಉದ್ಯಮಿ ವಿಜಯ ಶೆಟ್ಟಿ ,ಅಜೆಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ, ಉಪಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ , ನಿರ್ದೇಶಕರಾದ ಹರೀಶ್ ಶೆಟ್ಟಿ ಪ್ರಸನ್ನ ಶೆಟ್ಟಿ , ಜೊಯ್ಸ್ ಮಿನೇಜಸ್, ಕೃಷ್ಣಕಾಂತ್ ನಾಯಕ್, ರೊನಾಲ್ಟ್ ಕ್ವಾಡ್ರಸ್, ಸಜಿತ್ ಹೆಗ್ಡೆ, ಸೂರಜ್ ಜೈನ್, ಸೂರಜ್ ಶೆಟ್ಟಿ ಉಪಸ್ಥಿತರಿದ್ದರು.
ಆರೋಗ್ಯ ತಪಾಸಣ ಶಿಬಿರ : ಸಂಸ್ಥೆ ಶುಭಾರಂಭದ ಸಂದರ್ಭ ಉಚಿತ ಆರೋಗ್ಯ ತಪಾಸಣೆ ಶಿಬಿರವು ನಿಟ್ಟೆ ಗಾಜಿಯ ಸ್ಪೆಷಾಲಿಟಿ ಹಾಸ್ಪಿಟಲ್ ಇವರಿಂದ ನಡೆಯಿತು
ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.ಜೊಯ್ ಮಿನೇಜಸ್ ವಂದಿಸಿದರು.
ರೇಶ್ಮಾ ಶೆಟ್ಟಿ ಹಾಗೂ ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
