
ಕಾರ್ಕಳ,ಏ.24: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿರುವ “ಭಯೋತ್ಪಾದಕ” ಎಂಬ ಪದ ಅವರ ವಿದೇಶಿ ಗುಲಾಮಿ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ. ಖರ್ಗೆಯವರು ಹಳೆಯ ರಾಜಕೀಯ ಪಕ್ಷವೆಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಹೇಳಿ ಕೇಳಿ ರಾಜ್ಯದ ಅತ್ಯಂತ ಹಿರಿಯ ರಾಜಕೀಯ ನಾಯಕರೆನಿಸಿಕೊಂಡವರು ಅವರು ಇತರರಿಗೆ ತಮ್ಮ ಮಾತು ಮತ್ತು ಕೃತಿಗಳಲ್ಲಿ ಮೇಲ್ಪಂಕ್ತಿಯಾಗಬೇಕೇ ಹೊರತು ಈ ರೀತಿ ಇತರರಿಗೆ ಸಹ್ಯವಲ್ಲದ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಒಂದುವೇಳೆ “ನಮಾಜ್” ಓದುವಾಗ “ವಿಷ ಸರ್ಪವೊಂದು ಬಂದರೆ ನಮಾಜ್ ನಿಲ್ಲಿಸಿ, ಅದನ್ನು ಸಾಯಿಸಬೇಕು” ಎಂದು ಆರ್.ಎಸ್.ಎಸ್.ಅನ್ನು ಉಲ್ಲೇಖಿಸಿ ಹೇಳಿದ ತಾವು ನಂತರ ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದು ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದ್ದೀರಿ. ಇದೀಗ ತಾವು ದೇಶದ ಪ್ರಧಾನಮಂತ್ರಿಯವರನ್ನು “Terrorist” (ಭಯೋತ್ಪಾದಕ) ಎಂದು ಹೇಳಿ ನಂತರ ನಾನು ಹೇಳಿದ್ದು “Terrorist” ಎಂದಲ್ಲ “he is terrorizing” ಎಂಬರ್ಥದಲ್ಲಿ ಹೇಳಿದ್ದು ಎಂದು ನುಣುಚಿಕೊಳ್ಳುವ ಪ್ರಯತ್ನ ಪಡುತ್ತಿದ್ದೀರಿ. ಮನುಷ್ಯ ವಯಸ್ಸಾದಂತೆ ಪಕ್ವತೆಯಿಂದ ಮಾಗಬೇಕೇ ಹೊರತು ಕೊಳೆತು ನಾರಬಾರದು ಎಂದು ಹೇಳಿದ್ದಾರೆ. ಪಕ್ವತೆಯ ಹಿರಿತನಕ್ಕೂ ವೃದ್ದಾಪ್ಯದ ಮಾನಸಿಕತೆಗೂ ತುಂಬಾ ವ್ಯತ್ಯಾಸವಿದೆ. ವಯಸ್ಸಾದಂತೆ ಪಕ್ವತೆಯಿಂದ ಮಾಗುವ ಬದಲು ನೀವು ವಯೋಸಹಜ ಎಂಬಂತೆ ಮಾನಸಿಕ ಸಾಮರ್ಥ್ಯವನ್ನು ಕಳೆದುಕೊಂಡಿದ್ದೀರೋ? ಎಂಬ ಸಂಶಯ ಬರುತ್ತಿದ್ದು ನಿಮ್ಮ ಈ ರೀತಿಯ ನಡವಳಿಕೆಯಿಂದ ನಿಮ್ಮ ಪಕ್ಷ ಜನರಿಂದ ದೂರವಾಗುತ್ತ ಬರುತ್ತಿದ್ದು, ಮುಂದೊಂದು ದಿನ ಪಕ್ಷವು ನಾಮಾವಶೇಷವಾಗುವ ದಿನಗಳು ದೂರವಿಲ್ಲ. ನಿಮ್ಮ ಈ ರೀತಿಯ ಹೇಳಿಕೆಯನ್ನು ಕಾರ್ಕಳ ಬಿಜೆಪಿ ಬಲವಾಗಿ ಖಂಡಿಸುತ್ತದೆ ಹಾಗೂ ನಿಮ್ಮ ಹೇಳಿಕೆಯ ಬಗ್ಗೆ ಭಾರತದ ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಿರುವುದನ್ನು ಸ್ವಾಗತಿಸುತ್ತದೆ. ನಮಗೂ ನಿಮ್ಮ ಭಾಷೆಯಲ್ಲಿಯೇ ಉತ್ತರ ನೀಡಲು ಗೊತ್ತಿದ್ದರೂ ಅದು ನಮ್ಮ ಸಂಸ್ಕಾರವಲ್ಲ ಎಂಬ ತಿಳುವಳಿಕೆ ನಮಗಿದೆ. ಇನ್ನಾದರೂ ದಾಸ್ಯದ ಮನೋಭಾವದಿಂದ ಹೊರಬಂದು ನಿಮ್ಮ ಹಿರಿತನಕ್ಕೆ ಅನುಗುಣವಾಗಿ ನಡೆದುಕೊಳ್ಳಿ ರವೀಂದ್ರ ಮೊಯ್ಲಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
