
ಬೆಂಗಳೂರು,ಮೇ.06: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ SC/ST ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸರ್ಕಾರಿ ವಸತಿಗೃಹಗಳನ್ನು ಹಂಚಿಕೆ ಮಾಡಲು ಆದೇಶಿಸಿದೆ. ಖಾಸಗಿ ಮನೆ ಮಾಲೀಕರು ಜಾತಿ ಆಧಾರದ ಮೇಲೆ ಬಾಡಿಗೆಗೆ ಮನೆ ನೀಡಲು ನಿರಾಕರಿಸುತ್ತಿರುವ ಗಂಭೀರ ವಿಚಾರದ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ಮನಗಂಡ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ, ಅಂತಹ ಸಿಬ್ಬಂದಿಗಳಿಗೆ ಸರ್ಕಾರಿ ಪೊಲೀಸ್ ವಸತಿಗೃಹಗಳ ಹಂಚಿಕೆಯಲ್ಲಿ ಆದ್ಯತೆ ನೀಡಲು ಆದೇಶಿಸಿದೆ.
ವಿಧಾನಸೌಧದಲ್ಲಿ ನಡೆದ ಸರ್ಕಾರಿ ವಿಧಾನಸಭಾ ಭರವಸೆಗಳ ಸಮಿತಿಯ ಸಭೆಯಲ್ಲಿ ಈ ವಿಷಯವು ಚರ್ಚೆಗೆ ಬಂದಿತ್ತು. ಕೆಲವು ಪ್ರದೇಶಗಳಲ್ಲಿ SC/ST ವರ್ಗಕ್ಕೆ ಸೇರಿದ ಪೊಲೀಸ್ ಸಿಬ್ಬಂದಿಗೆ ಜಾತಿ ಕಾರಣಕ್ಕಾಗಿ ಬಾಡಿಗೆ ಮನೆಗಳನ್ನು ನೀಡಲು ನಿರಾಕರಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರು ಗಮನ ಸೆಳೆದಿದ್ದರು. ಇದರಿಂದಾಗಿ ಸಿಬ್ಬಂದಿಗಳು ಅನಿವಾರ್ಯವಾಗಿ ದೂರದ ಪ್ರದೇಶಗಳಲ್ಲಿ ವಾಸಿಸಬೇಕಾಗಿದ್ದು, ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗಲು ತೊಂದರೆಯಾಗುತ್ತಿದೆ ಎಂಬ ಅಂಶ ಚರ್ಚೆಯಾಗಿತ್ತು.
ಈ ಸಮಸ್ಯೆಯನ್ನು ಪರಿಹರಿಸಲು ಡಿಜಿ ಮತ್ತು ಐಜಿಪಿ ಅವರ ಅನುಮೋದನೆಯೊಂದಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಜಾತಿ ತಾರತಮ್ಯದ ಕಾರಣದಿಂದ ತಮಗೆ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಮನವಿ ಸಲ್ಲಿಸುವ SC/ST ಪೊಲೀಸ್ ಸಿಬ್ಬಂದಿಗಳ ಅರ್ಜಿಗಳನ್ನು ತಕ್ಷಣವೇ ಪರಿಶೀಲಿಸಬೇಕು.ಅಂತಹ ಸಿಬ್ಬಂದಿಗಳಿಗೆ ಇಲಾಖೆಯ ವಸತಿಗೃಹಗಳಲ್ಲಿ ಖಾಲಿ ಇರುವ ಮನೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಸಾಮಾನ್ಯವಾಗಿ ಜೇಷ್ಠತೆಯ ಆಧಾರದ ಮೇಲೆ ಮನೆ ಹಂಚಿಕೆ ಮಾಡಲಾಗುತ್ತದೆಯಾದರೂ, ಇಂತಹ ವಿಶೇಷ ಸಂದರ್ಭಗಳಲ್ಲಿ ಸಿಬ್ಬಂದಿಗಳ ಹಿತದೃಷ್ಟಿಯಿಂದ ಆದ್ಯತೆ ನೀಡಲು ಸೂಚಿಸಲಾಗಿದೆ. ಈ ಸಂಬAಧ ರಾಜ್ಯದ ಎಲ್ಲಾ ಘಟಕದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಸತಿ ಸಮಸ್ಯೆಯಿಂದಾಗಿ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಿರ್ದೇಶಿಸಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
