
ಕೋಲ್ಕತ್ತಾ,ಮೇ.06: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತ ಬಳಿಕ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಚುನಾವಣೆಗಳು ನ್ಯಾಯಯುತವಾಗಿರಲಿಲ್ಲ ಆದ್ದರಿಂದ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಿಗೆ ಸೇರಿ ಸಮಾರು 100 ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಮಮತಾ ಬ್ಯಾನರ್ಜಿ, ಅಕ್ರಮ ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿ ಮತಗಟ್ಟೆಯಿಂದ ಹೊರಹಾಕಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ. ನಾವು ಸೋತಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ. ನಾನು ರಾಜಭವನಕ್ಕೆ ಭೇಟಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಜೀನಾಮೆ ಕೊಡುವುದಿಲ್ಲ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದು, ಬಂಗಾಳದ ಜನತೆ ನೀಡಿದ ಜನಾದೇಶವನ್ನು ಗೌರವಿಸಬೇಕು, ರಾಜೀನಾಮೆ ನೀಡದಿದ್ದಲ್ಲಿ ಕಿತ್ತೆಸೆಯಲಾಗುವುದು ಎಂದು ಗುಡುಗಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶ ಅವರ ಇಚ್ಚೆಯಂತೆ ನಡೆಯುವುದಿಲ್ಲ. ಅವರು ರಾಜೀನಾಮೆ ನೀಡದಿದ್ರೆ ವಜಾಗೊಳಿಸಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಯವರೆಗೆ ರಾಜ್ಯಪಾಲರು ಕಾಯುತ್ತಾರೆ. ತದನಂತರ ಅವರನ್ನು ವಜಾಗೊಳಿಸಲಾಗುತ್ತದೆ.
ಚುನಾವಣಾ ಫಲಿತಾಂಶ ಘೋಷಿಸಲಾಗಿದೆ, 100 ಸ್ಥಾನಗಳನ್ನು ನಿಮ್ಮಿಂದ ಕಸಿದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದೀರಾ? ಹಾಗಾದರೆ, ಅಸ್ಸಾಂನಲ್ಲಿ ಕಾಂಗ್ರೆಸ್ ಗೆದ್ದ 19 ಸ್ಥಾನಗಳನ್ನು ನನ್ನಿಂದ ಕಸಿದುಕೊಳ್ಳಲಾಗಿದೆ ಎಂದು ನಾನು ಹೇಳಬಹುದು. ನನಗೂ 126 ಸಿಗಬೇಕಿತ್ತು ಎಂದು ಹೇಳುತ್ತೇನೆ. ಇಂತಹ ವಿತ್ತಂಡ ವಾದದಿಂದ ದೇಶ ನಡೆಯಲು ಸಾಧ್ಯವಿಲ್ಲ ಎಂದರು. ಸೋಲನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಭಾರತ ಕರುಣೆ ಹೊಂದಿರುವ ದೇಶವಾದ್ದರಿಂದ ಬಂಗಾಳ ಜನರು ಬ್ಯಾನರ್ಜಿಯನ್ನು ಇಷ್ಟು ದಿನ ಸಹಿಸಿಕೊಂಡಿದ್ದಾರೆ. ಗಡಿಯಲ್ಲಿ ಬೇಲಿ ಹಾಕಲು ಅವಕಾಶ ನೀಡದ ಮಮತಾ, ನಂತರ ಸೀಟುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳುತ್ತಾರೆ. ಈ ಫಲಿತಾಂಶ ಬಹಳ ಹಿಂದೆಯೇ ಬರಬೇಕಿತ್ತು. ಪಶ್ಚಿಮ ಬಂಗಾಳದ ಜನರು ಅವರಿಗೆ ಬಹಳಷ್ಟು ನೀಡಿದ್ದಾರೆ. ಈಗ ಬಿಜೆಪಿಗೆ ಜನಾದೇಶ ನೀಡಿದ್ದು, ರಾಜೀನಾಮೆ ನೀಡಲ್ಲ ಅಂತಿದ್ದಾರೆ. ಅವರು ರಾಜೀನಾಮೆ ನೀಡ್ತಾರೋ , ಇಲ್ಲವೋ ಎಂಬುದರ ಆಧಾರದ ಮೇಲೆ ಸಮಾಜ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಾರ್ನಿಂಗ್ ನೀಡಿದರು.



.
.
.
.
.
.
.
.
.
.
.
.
.
.
.
.
.
.
.
.
