

ಉಡುಪಿ, ಅ.31: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನಡೆದು ಬಂದಿದೆ. ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾಡಳಿತವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನೇ ಕೈಬಿಟ್ಟಿದ್ದು, ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನಿರಾಸೆಯಾಗಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಸನ್ಮಾನಿತರಿಗೆ ಒಂದು ಲಕ್ಷ ನಗದು ಜೊತೆಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುತ್ತದೆ. ಆದರೆ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲೇಬೇಕೆಂಬ ಯಾವುದೇ ನಿರ್ದಿಷ್ಟ ಸರ್ಕಾರಿ ನಿಯಮಾವಳಿಗಳು ಇಲ್ಲ. ಪ್ರಶಸ್ತಿ ನೀಡುವುದು ಅಥವಾ ಬಿಡುವುದು ಆಯಾ ಜಿಲ್ಲಾಡಳಿತಗಳ ವಿವೇಚನೆಗೆ ಬಟ್ಟ ವಿಷಯವಾಗಿದೆ. ಜಿಲ್ಲಾಡಳಿತವು ಈ ಬಾರಿ ಯಾಕಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೈಬಿಡಲಾಗಿದೆ ಎನ್ನುವುದಕ್ಕೆ ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲ.ಆದರೆ ಈ ಪ್ರಶಸ್ತಿ ನೀಡಿಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಅಧಿಕೃತ ಆದೇಶ ಇಲ್ಲದಿರುವುದನ್ನು ಉಲ್ಲೇಖಿಸಿ ಈ ಬಾರಿ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಶಿಫಾರಸು ಪತ್ರಗಳನ್ನು ಪಡೆಯಲು ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಿದ್ದ ಸಾಧಕರಿಗೆ ಉಡುಪಿ ಜಿಲ್ಲಾಡಳಿತದ ಕೊನೆಯ ಕ್ಷಣದ ನಿರ್ಧಾರದಿಂದ ತೀವ್ರ ನಿರಾಸೆಯಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
