

ಕಾರ್ಕಳ, ಅ.13: ಕರಾವಳಿ ಭಾಗದ ರೈತರು ಅದರಲ್ಲಿಯೂ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ರೈತರು ಪ್ರತಿವರ್ಷ ಸಾಂಪ್ರದಾಯಿಕವಾಗಿ ಕೆಂಪು ಬತ್ತದ ತಳಿಗಳಾದ ಕಜೆ ಜಯ, ಎಂ.ಓ 4, ಎಂ.ಓ 16 ,ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಸೇರಿದಂತೆ ಇತರೆ ಹಲವು ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ಆದರೆ ಪ್ರಸ್ತುತ ವರ್ಷ ರೈತರು ಬೆಳೆಯುತ್ತಿರುವ ಕೆಂಪು ಭತ್ತಕ್ಕೆ ಮಾರುಕಟ್ಟೆ ಹಾಗೂ ಕನಿಷ್ಠ ಬೆಂಬಲ ದೊರೆಯದೇ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಒಂದು ಎಕರೆ ಭತ್ತದ ಗದ್ದೆ ನಾಟಿ ಮಾಡಲು ಅಂದಾಜು 63,770 ವೆಚ್ಚವಾಗುತ್ತಿದೆ. ಆದರೆ ಇದರಿಂದ ಕೇವಲ 15 ಕ್ವಿಂಟಲ್ ಇಳುವರಿ ಪಡೆಯಲು ಮಾತ್ರ ಸಾಧ್ಯ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಭತ್ತವನ್ನು ಕೇವಲ 2400 ರೂನಂತೆ ಖರೀದಿಸುತ್ತಿದ್ದು ಇದರಿಂದಾಗಿ 15 ಕ್ವಿಂಟಲ್ ಗೆ ಕೇವಲ 47,250 ಸಿಗುತ್ತಿದ್ದು, ಇದರಿಂದ ಪ್ರತೀ ಎಕರೆಗೆ ಸುಮಾರು 16520 ನಷ್ಟವಾಗುತ್ತಿದೆ. ಸರಿಯಾಗಿ ಮಳೆ ಇಲ್ಲದೇ ಕಂಗಾಲಾದ ರೈತರು ಸರಿಯಾದ ಬೆಲೆ ಸಿಗದೇ ಭತ್ತದ ಕೃಷಿಯಿಂದ ದೂರವಾಗುತ್ತಿದ್ದಾರೆ.
ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕಿದ್ದು ಪ್ರತೀ ಕೆಜಿ ಭತ್ತವನ್ನು 40 ರೂಗೆ ಖರೀದಿಸಿ 500 ಪ್ರೋತ್ಸಾಹ ಧನವನ್ನು ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಅಲ್ಲದೆ ತಕ್ಷಣವೇ ರೈತ ಸಂಘಗಳ ಮುಖಂಡರ ಹಾಗೂ ಅಕ್ಕಿ ಗಿರಣಿ ಮಾಲೀಕರ ಜಂಟಿ ಸಭೆ ನಡೆಸಿ ಭತ್ತದ ದರ ನಿಗದಿಪಡಿಸಿ ರೈತರಿಗೆ ನೆರವಿಗೆ ಬರಬೇಕೆಂದು ಕೃಷಿ ಕಿಸಾನ್ ರಕ್ಷಣಾ ಸಂಘದ ಅಧ್ಯಕ್ಷ ರೆಂಜಾಳ ಸುಕೀರ್ತಿ ಜೈನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
