ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಪ್ರಸ್ತುತ ಸಾಗುವಳಿ ಸಕ್ರಮೀಕರಣಕ್ಕೆ ಅರ್ಜಿ ಹಾಕಿದ ರೈತರು ಹಾಗೂ ಸರಕಾರಿ ಜಾಗದಲ್ಲಿ ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ಕಟ್ಟಿಕೊಂಡ ಬಡವರ ಹಲವಾರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಈವರೆಗೂ ಹಕ್ಕು ಪತ್ರ ದೊರಕದೇ ಇರುವ ಸಮಸ್ಯೇತರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಜನವರಿ 2 ನೇ ವಾರದಲ್ಲಿ ಕಡತ ವಿಲೇವಾರಿ ಸಪ್ತಾಹ ಆಯೋಜಿಸಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ನೀಡಿದ್ದಾರೆ.
ಬೈಂದೂರು ತಹಸೀಲ್ದಾರ್ ಹಾಗೂ ಬೈಂದೂರು ಹೋಬಳಿಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಬಾಕಿ ಇರುವ ಶೂನ್ಯ ಸಮಸ್ಯಾತ್ಮಕ ಎಲ್ಲಾ ಅರ್ಹ ಕಡತಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ಒದಗಿಸಲು ಕ್ರಮ ವಹಿಸಲು ಹಾಗೂ ಜನವರಿ ತಿಂಗಳ ಅಂತ್ಯದೊಳಗೆ ಎಲ್ಲಾ ಸಮಸ್ಯೇತರ ಕಡತಗಳನ್ನು ವಿಲೇವಾರಿ ಮಾಡಿ ರೈತರಿಗೆ ಹಕ್ಕು ಪತ್ರ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೇ ಜನವರಿ ಅಂತ್ಯಕ್ಕೆ ಸಮಸ್ಯಾತ್ಮಕವಲ್ಲದ ಯಾವುದೇ ಕಡತಗಳು ಬಾಕಿ ಉಳಿಯದಂತೆ ಕಂದಾಯ ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಸ್ಪಷ್ಟವಾಗಿ ಮೌಖಿಕ ಆದೇಶ ನೀಡಿದ್ದಾರೆ.
ಸಭೆಯಲ್ಲಿ ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ವಿಷಯ ನಿರ್ವಾಹಕರು ಹಾಗೂ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.