

ಬೆಂಗಳೂರು,ಅ.11: ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಬೋಧನೆಗಾಗಿ ನೇಮಕಗೊಳ್ಳುವ ಅತಿಥಿ ಶಿಕ್ಷಕರ ಅರ್ಹತಾ ನಿಯಮಗಳನ್ನು ಸಡಿಲಿಸಿ ಆದೇಶ ಹೊರಡಿಸಿದೆ. ಪ್ರಾಥಮಿಕ ತರಗತಿಯಿಂದ ಹಿಡಿದು ಪದವಿ ಹಂತದವರೆಗೆ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಓದಿದವರಿಗೂ ಅಥವಾ ನಿಗದಿತ ಇಂಗ್ಲಿಷ್ ಅರ್ಹತೆ ಹೊಂದಿರುವವರಿಗೂ ಅವಕಾಶ ಕಲ್ಪಿಸಲಾಗಿದೆ.ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಬೋಧನೆಗಾಗಿ ಅತಿಥಿ ಶಿಕ್ಷಕರನ್ನು 6 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಸುಲಭವಾಗಿ ಕಲಿಸಲು ಮತ್ತು ಶಿಕ್ಷಕರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಆರಂಭದಲ್ಲಿ ಹೊರಡಿಸಲಾಗಿದ್ದ ಮಾರ್ಗಸೂಚಿಗಳ ಅನ್ವಯ, ಸ್ಪೋಕನ್ ಇಂಗ್ಲಿಷ್ ಬೋಧನೆಗೆ ಅತಿಥಿ ಶಿಕ್ಷಕರಾಗಲು ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಹೊಂದಿರಬೇಕಿತ್ತು. ಕಲಾ ಪದವಿಯಲ್ಲಿ ಐಚ್ಛಿಕ ಇಂಗ್ಲಿಷ್ ಅನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು ಅಥವಾ ಇಂಗ್ಲಿಷ್ ಆನರ್ಸ್ನಲ್ಲಿ ತೇರ್ಗಡೆಯಾಗಿರಬೇಕು ಇಲ್ಲವೇ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಹೊಂದಿರಲೇಬೇಕು ಎಂಬ ನಿಬಂಧನೆ ವಿಧಿಸಲಾಗಿತ್ತು. ಇದೀಗ ಪರಿಷ್ಕೃತ ಸುತ್ತೋಲೆಯಲ್ಲಿ ಪ್ರಾಥಮಿಕ ತರಗತಿಯಿಂದ ಹಿಡಿದು ಪದವಿ ಹಂತದವರೆಗೆ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡಿರುವ ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮತ್ತು ಸುಲಲಿತವಾಗಿ ಮಾತನಾಡುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನೂ ಅತಿಥಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಲು ಅರ್ಹರೆಂದು ಘೋಷಿಸಲಾಗಿದೆ.
ಸಂಬAಧಪಟ್ಟ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ಕೂಡಲೇ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಯೋಜನಾ ನಿರ್ದೇಶಕಿ ಕೆ. ವಿದ್ಯಾಕುಮಾರಿ ಆದೇಶಿಸಿದ್ದಾರೆ. ನೇಮಕಗೊಂಡ ಶಿಕ್ಷಕರ ಸಂಪೂರ್ಣ ವಿವರಗಳನ್ನು ನಿಗದಿತ ಅನುಬಂಧ-1 ರಲ್ಲಿ ಭರ್ತಿ ಮಾಡಿ, ಕಚೇರಿಯ ಅಧಿಕೃತ ಇ-ಮೇಲ್ ssಞಠಿoeಛಿeಟಟ@gmಚಿiಟ.ಛಿom ಮೂಲಕ ತಕ್ಷಣವೇ ಸಲ್ಲಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
