ಬೆಂಗಳೂರು: ಕರ್ನಾಟಕದಲ್ಲಿ ಸುಳ್ಳು ಸುದ್ದಿ, ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025 ಕರಡು ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.
ದ್ವೇಷ ಭಾಷಣವು ದೇಶದ ಜ್ಯಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜತೆಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ದ್ವೇಷ ಭಾಷಣ, ಪ್ರಚೋದನೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ.ಸತ್ಯ ಮತ್ತು/ಅಥವಾ ಸಂದರ್ಭದ ವಿರೂಪಕ್ಕೆ ಕಾರಣವಾಗುವ ಆಡಿಯೋ ಅಥವಾ ವೀಡಿಯೊ ತುಣುಕುಗಳನ್ನು ಸಂಪಾದಿಸುವುದು, ಕಾನೂನುಬದ್ಧ, ಸಂಘಟಿತ ಅಥವಾ ಅಸಂಘಟಿತ, ಅದು ಸಾಮಾಜಿಕ ಮಾಧ್ಯಮ ವಿಷಯವನ್ನು ಬಳಸಿಕೊಳ್ಳುವುದು, ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ, ಪರಿಶೀಲಿಸಿದ ಅಥವಾ ಗುಪ್ತನಾಮ, ಕಾಲ್ಪನಿಕ ಅಥವಾ ಸುಳ್ಳು ಖಾತೆ/ಪುಟದ ಹೆಸರಿನ ಮೂಲಕ ಸಂದೇಶಗಳು ಮತ್ತು/ಅಥವಾ ಮಾಹಿತಿಯನ್ನು ಕಳುಹಿಸುವುದು, ನಕಲಿ ಸುದ್ದಿಗಳನ್ನು ಹರಡುವುದನ್ನು ಸಂಪೂರ್ಣ ನಿಷೇಧಿಸುವುದನ್ನು ಕಾನೂನು ಖಚಿತಪಡಿಸುತ್ತದೆ.
ಕಾಯ್ದೆಯನ್ನು ಜಾರಿಗೆ ತರಲು ನಕಲಿ ಸುದ್ದಿ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಾಗುತ್ತದೆ. ಈ ಪ್ರಾಧಿಕಾರವು ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಮತ್ತು ಪ್ರಸಾರ ಸಚಿವರನ್ನು ಪದನಿಮಿತ್ತ ಅಧ್ಯಕ್ಷರನ್ನಾಗಿ, ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿನಿಂದ ತಲಾ ಒಬ್ಬ ಸದಸ್ಯರನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡುತ್ತಾರೆ. ರಾಜ್ಯ ಸರ್ಕಾರದಿಂದ ನೇಮಕಗೊಳ್ಳುವ ಸಾಮಾಜಿಕ ಮಾಧ್ಯಮ ವೇದಿಕೆಗಳ ಇಬ್ಬರು ಪ್ರತಿನಿಧಿಗಳು ಮತ್ತು ಕಾರ್ಯದರ್ಶಿಯಾಗಿ ಒಬ್ಬ ಐಎಎಸ್ ಅಧಿಕಾರಿಯನ್ನು ಒಳಗೊಂಡಿರುತ್ತದೆ.