
ಶಿವಮೊಗ್ಗ, ಜೂ.12: ಮಳೆಗಾಲದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ ಜೂನ್ 15 ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿಯ ಭೂಕುಸಿತ ಆಗುವ, ಅಫಘಾತವಾಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.
ಆಗುಂಬೆ ಘಾಟಿ ಮಾರ್ಗವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಉಡುಪಿ, ಮಂಗಳೂರು ಹಾಗೂ ಮಣಿಪಾಲ್ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ತೆರಳಲು ಪ್ರಮುಖ ಸಂಪರ್ಕವಾಗಿದೆ. ಇದೀಗ ಈ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತವು ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು: ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸಬೇಕು. ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು: ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ರಸ್ತೆಯನ್ನು ಬಳಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
