ಕಾರ್ಕಳ: ಮನೆಯೊಂದರಲ್ಲಿ ಅಪಾರ ಪ್ರಮಾಣದ ಅಕ್ರಮ ಮದ್ಯ ದಾಸ್ತಾನು ಇರಿಸಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕಾರ್ಕಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಗುರುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ದಾಳಿ ನಡೆಸಿ ಸುಮಾರು 15 ಲಕ್ಷ ಮೌಲ್ಯದ ಬರೋಬ್ಬರಿ 272 ಬಾಕ್ಸ್ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಬ್ಯನಡ್ಕ ನಿವಾಸಿ ಅವಿನಾಶ್ ಮಲ್ಲಿ ಹಾಗೂ ಮರಿಮಾರ್’ಗುತ್ತು ನಿವಾಸಿ ಪ್ರಶಾಂತ ಸುವರ್ಣ ಎಂಬವರ ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಲಾಗಿದೆ ಎಂದು ಸ್ಪಷ್ಟ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ಈ ಪೈಕಿ ಅವಿನಾಶ್ ಮಲ್ಲಿ ಮನೆಯಲ್ಲಿ 266 ಬಾಕ್ಸ್ ಹಾಗೂ ಪ್ರಶಾಂತ ಸುವರ್ಣ ಮನೆಯಲ್ಲಿ 6 ಬಾಕ್ಸ್ ಅಕ್ರಮ ಮದ್ಯ ಪತ್ತೆಯಾಗಿದೆ.
ಬ್ರ್ಯಾಂಡೆಡ್ ಕಂಪೆನಿಗಳಾದ ಜಾನಿ ವಾಕರ್, ಬ್ಲಾಕ್ ಲೇಬಲ್, ಬ್ಲ್ಯಾಕ್ ಆಂಡ್ ವೈಟ್, ಮ್ಯಾನ್ಶನ್ ಹೌಸ್ (MH), ಮ್ಯಾಕ್‌ಡ್ವೆಲ್ (MC), ಓಡ್ಕ ಲೇಬಲ್‌ನ ಮದ್ಯ ಎಂದು ತಿಳಿದುಬಂದಿದೆ.
ಅಬಕಾರಿ ಪೊಲೀಸರ ದಾಳಿ ವೇಳೆ ಆರೋಪಿ ಅವಿನಾಶ್ ಮಲ್ಲಿ ಪರಾರಿಯಾಗಿದ್ದು, ಇನ್ನೋರ್ವ ಆರೋಪಿ ಪ್ರಶಾಂತ ಸುವರ್ಣ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೇ ಪರಾರಿಯಾಗಿರುವ ಆರೋಪಿ ಅವಿನಾಶ್ ಮಲ್ಲಿ ಎಂಬಾತನ ಬಂಧನಕ್ಕೆ ಬಲೆಬೀಸಿದ್ದಾರೆ.
ಗೋವಾದಿಂದ ಬರುವ ಹಣ್ಣು, ತರಕಾರಿ ಲಾರಿಗಳಲ್ಲಿ ಅಕ್ರಮವಾಗಿ ಮದ್ಯದ ಬಾಕ್ಸ್ ಗಳನ್ನು ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಸ್ಥಳೀಯವಾಗಿ ನಡೆಯುವ ಡಿನ್ನರ್ ಪಾರ್ಟಿಗಳಿಗೆ ಮದ್ಯವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು ಮಾತ್ರವಲ್ಲದೇ ಕೇರಳಕ್ಕೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎಂದು ಉಡುಪಿ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಬಿಂದುಶ್ರೀ.ಪಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಡುಪಿ ಅಬಕಾರಿ ಎಸ್ಪಿ ಶಿವಪ್ರಸಾದ್, ಡಿವೈಎಸ್ಪಿ ಗುರುಮೂರ್ತಿ ಡಿ.ಪಾಲೇಕರ್, ಅಬಕಾರಿ ನಿರೀಕ್ಷಕಿ ಜ್ಯೋತಿ, ಉಡುಪಿ ಅಬಕಾರಿ ಉಪ ನಿರೀಕ್ಷಕ ನಿರೀಕ್ಷಕ ರಾಘವೇಂದ್ರ,ಮಿಲ್ಲರ್ ಡಿಸೋಜ,ಉಪ ನಿರೀಕ್ಷಕ ಕೃಷ್ಣ, ನಿತ್ಯಾನಂದ, ಶಿವಶಂಕರ, ದಿವಾಕರ, ಚಂದ್ರ ಮೊಗವೀರ,ಸಿಬ್ಬಂದಿಗಳಾದ ಚಂದ್ರಶೇಖರ ಪಾಟೀಲ, ನಿರ್ಮಲಾ ನಾಯಕ್, ಶಂಕರಾನಂದ,ನಂಜುಂಡಸ್ವಾಮಿ,ಪ್ರಹ್ಲಾದ್, ರಾಜಶೇಖರ, ಖಾಜಾ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ,ಮಹಾಂತೇಶ್,ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ,ಪ್ರದೀಪ್, ಸುಧಾಕರ ಭಾಗವಹಿಸಿದ್ದರು,
ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಸ್ವತಃ ಅಬಕಾರಿ ಅಧಿಕಾರಿಗಳು ದಂಗಾಗಿದ್ದಾರೆ.