
ಕಾರ್ಕಳ, ಜೂ,15: ಮಳೆಗಾಲದ ಸಂದರ್ಭದಲ್ಲಿ ಎದುರಾಗಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಧಿಕಾರಿಗಳು ಸನ್ನದ್ದರಾಗಬೇಕು.ಈ ನಿಟ್ಟಿನಲ್ಲಿ ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದಾಗ ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಸೋಮವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣಾ ಸಭೆ ನಡೆಸಿ ಮಾತನಾಡಿ,ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳು ಕರ್ತವ್ಯದಿಂದ ವಿಮುಖರಾಗದೇ ಕಾರ್ಯನಿರ್ವಹಿಸಬೇಕು. ವಿಪತ್ತು ನಿರ್ವಹಣೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳ ಜೊತೆಗೆ ಸಂಪರ್ಕ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದ ಮುಂಚಿತವಾಗಿ ಮೆಸ್ಕಾಂ ಕೈಗೊಂಡ ಕ್ರಮದ ಕುರಿತು ಮೆಸ್ಕಾಂ ಎಇಇ ಮಾತನಾಡಿ, ಮಳೆಗಾಲದಲ್ಲಿ ಉಂಟಾಗುವ ತೊಂದರೆ ನಿಭಾಯಿಸಲು 24 ಜನ ಗ್ಯಾಂಗ್ ಮೆನ್ ನೇಮಕ ಮಾಡಲಾಗಿದೆ. ಅರಣ್ಯ ಪ್ರದೇಶಗಳಾದ ಹೊಸ್ಮಾರು,ಹೆಬ್ರಿ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಎದುರಾಗಬಹುದು,ಉಳಿದಂತೆ ನಗರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಗ್ನಿಶಾಮಕ ದಳದ ಅಧಿಕಾರಿ ಮಾತನಾಡಿ, ಪ್ರವಾಹ ಪರಿಸ್ಥಿತಿ ಎದುರಿಸಲು ಈಗಾಗಲೇ
ಬೋಟ್, ಲೈಫ್ ಜಾಕೆಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 13 ಜನ ಸಿಬ್ಬಂದಿಗಳಿದ್ದಾರೆ.ಮಳೆಗಾಲದಲ್ಲಿ ಇನ್ನಾ,ಎಣ್ಣೆಹೊಳೆ,ಸೂಡದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದರು.
ಇನ್ನುಳಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಔಷಧಿ ಲಭ್ಯತೆ ಕುರಿತು ಶಾಸಕರು ಮಾಹಿತಿ ಪಡೆದುಕೊಂಡರು. ಕಲುಷಿತ ನೀರು ಶುದ್ಧೀಕರಣಕ್ಕೆ ಆದ್ಯತೆ, PHC ವೈದ್ಯರ ಜೊತೆ ಸಭೆ ನಡೆಸಿ ಕ್ರಮವಹಿಸುವಂತೆ ಶಾಸಕ ಸುನಿಲ್ ಕುಮಾರ್ ಸೂಚಿಸಿದರು.

ರಸ್ತೆ ಬದಿಯಲ್ಲಿ ಶಾಶ್ವತ ಅನಧಿಕೃತ ನಿರ್ಮಾಣಗಳಿಂದ ತ್ಯಾಜ್ಯ ಸಂಗ್ರಹ, ಕೊಳಚೆ ನೀರು ಶೇಖರಣೆಯಾಗಿ ಸಮಸ್ಯೆಯಾಗುತ್ತದೆ. ಆದ್ದರಿಂದ ಅನಧಿಕೃತವಾಗಿ ಶಾಶ್ವತ ಕಟ್ಟಡಗಳನ್ನು ತೆರವು ಮಾಡಿ ಕೇವಲ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದರು
ಶಾಲಾ ಆವರಣ, ಅಂಗನವಾಡಿ ಪರಿಸರದಲ್ಲಿನ ಅಪಾಯಕಾರಿ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಗಳಿಗೆ ಮಕ್ಕಳು ಹಳ್ಳ, ತೋಡು ದಾಟಿ ಬರುವ ಪ್ರದೇಶದ ಹಾಗೂ ಶಾಲೆಯ ಮಾಹಿತಿ ನೀಡುವಂತೆ ಶಾಸಕರು ಸೂಚಿಸಿದರು. ಈಗಾಗಲೇ ಬಹುತೇಕ ಕಡೆಗಳಲ್ಲಿ ಕಾಲು ಸಂಕ, ಕಿರು ಸೇತುವೆ, ಸೇತುವೆಗಳ ನಿರ್ಮಾಣವಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ಮಾಹಿತಿ ಕೊಡಿ ಕೂಡಲೇ ಕಿರುಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತದೆ ಎಂದು ಸುನಿಲ್ ಕುಮಾರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುಮಾರ್, ಹೆಬ್ರಿ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ ಇಒ ಪ್ರಶಾಂತ್ ರಾವ್ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
