ಮಂಗಳೂರು: ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ವತಿಯಿಂದ ತಾಲೂಕು ಮಟ್ಟದ 11ನೇ ವಿಶ್ವ ಯೋಗ ದಿನಾಚರಣೆ ಮಂಗಳ ಜ್ಯೋತಿ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಯೋಗದಲ್ಲಿ ಹಲವಾರು ಸಾಧನೆ ಮಾಡಿದ ಮಂಗಳ ಜ್ಯೋತಿಯಲ್ಲಿ ತಾಲೂಕು ಮಟ್ಟದ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ. ವಿಶೇಷ ಸಾಮರ್ಥ್ಯದ ಮಕ್ಕಳು ಸಾಮಾನ್ಯ ಮಕ್ಕಳಂತೆ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ. ನಿತ್ಯ ನಿರಂತರ ಯೋಗಭ್ಯಾಸ ಮಾಡುವುದರಿಂದ ಬದುಕು ಸುಂದರವಾಗುತ್ತದೆ. ಮನೆಯಲ್ಲಿ ಹೆತ್ತವರು ಕೂಡ ಯೋಗಾಭ್ಯಾಸ ಮಾಡುವಂತೆ ವಿದ್ಯಾರ್ಥಿಗಳು ಪ್ರೇರಣೆ ನೀಡಬೇಕು.ತನ್ಮೂಲಕ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಮಾತನಾಡಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್ ಯೋಗವು ನಮ್ಮ ದೈನಂದಿನ ಬದುಕಿನ ಅಂಗವಾಗಬೇಕು. ಕ್ರೀಡೆಗೆ ಬಹಳಷ್ಟು ಕೊಡುಗೆ ಕೊಡುತ್ತಿರುವ ಮಂಗಳಜ್ಯೋತಿ ಈ ಪ್ರದೇಶದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದ್ದು, ಇಲಾಖಾ ವತಿಯಿಂದ ಅಭಿನಂದನೆಗಳು ಎಂದು ಶುಭ ಹಾರೈಸಿದರು. ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ ನಮ್ಮ ಶಾಲೆಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸುಯೋಗ. ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದೆ ಎಂದು ಹೇಳಿದರು.
ನೂರಕ್ಕೂ ಹೆಚ್ಚು ವಿಶೇಷ ಸಾಮರ್ಥ್ಯದ ಮಕ್ಕಳು, ಸಾಮಾನ್ಯ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಯೋಗಾಭ್ಯಾಸ ಮಾಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರಮೇಶ್ ಆಚಾರ್ಯ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್, ಪ್ರಾಥಮಿಕ ಮುಖ್ಯ ಶಿಕ್ಷಕ ವಿಠಲ ವಾಗ್ಮೊರೆ ಇದ್ದರು. ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಯೋಗಭ್ಯಾಸ ನಡೆಸಿದರು. ಹರಿಣಾಕ್ಷಿ ವಂದಿಸಿದರು.