ಬೆಂಗಳೂರು: ಕೊರೊನಾ ಮಹಾಮಾರಿ ಕರಿನೆರಳಿನಿಂದ ಜನರು ಹೊರಬಂದು ನೆಮ್ಮದಿಯ ಜೀವನ ನಡೆಸುತ್ತಿರುವ ಸಂದರ್ಭದಲ್ಲೀ ಇದೀಗ ಚೀನಾದಲ್ಲಿ ಮತ್ತೆ ಮತ್ತೊಂದು ವೈರಸ್ ರಣಕೇಕೆ ಹಾಕುತ್ತಿದೆ. ಬೆಂಗಳೂರಿನಲ್ಲೂ ಹೆಚ್‌ಎಂಪಿ ವೈರಸ್ ಪತ್ತೆಯಾಗಿದ್ದು, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್‌ಎಂಪಿ ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.
ಬಹಳ ವರ್ಷಗಳಿಂದ ಹೆಚ್‌ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್‌ಎಂಪಿ ವೈರಸ್ ರೀತಿ ನೂರಾರು ವೈರಸ್‌ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್‌ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. ಇದರಿಂದ ಜೀವಕ್ಕೆ ಏನೂ ಅಪಾಯವಿಲ್ಲ ಎಂದರು.
ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್‌ಎಂಪಿವಿ ಪ್ರಕರಣವಲ್ಲ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿಲ್ಲ. ವೈದ್ಯಕೀಯ ಪರಿಕರ ಖರೀದಿ ಸಹಜವಾಗಿಯೇ ನಡೆಯುತ್ತಿದೆ. ಆಯಾ ಆಸ್ಪತ್ರೆಗಳಿಂದಲೇ ವೈದ್ಯಕೀಯ ಸಾಮಗ್ರಿ ಖರೀದಿ ಮಾಡಲಾಗುವುದು ಎಂದಿದ್ದಾರೆ.
ಕೇAದ್ರ ಸರ್ಕಾರ ಐಸಿಎಂಆರ್ ಸರ್ವಲೆನ್ಸ್ ಮಾಡುತ್ತಿದೆ. ಐಸಿಎಂಆರ್ ಪ್ರಕಾರ ಶೇ 1ರಷ್ಟು ಹೆಚ್‌ಎಂಪಿವಿ ಬರುತ್ತದೆ. ಈ ವೈರಸ್ ಬಂದ ಬಳಿಕ ಗುಣಮುಖರಾಗುತ್ತಾರೆ. ಹೆಚ್‌ಎಂಪಿವಿ ಬಂದ ಎರಡು ಮಕ್ಕಳು ಗುಣಮುಖರಾಗಿದ್ದಾರೆ. ಮಾಸ್ಕ್ ಹಾಕಬೇಕು, ಲಾಕ್ ಡೌನ್ ಮಾಡಬೇಕು ಎಂದೇನೂ ಇಲ್ಲ. ಎಚ್ಚರಿಕೆಯಿಂದ ಇರಬೇಕು ಅಷ್ಟೇ. ಈಗಾಗಲೇ ನಾವು ಕೂಡ ಮಾರ್ಗಸೂಚಿ ಪ್ರಕಟಿಸಿದ್ದೇವೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.