ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ದರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲದಲ್ಲಿ ತಿರುಪತಿ ಮಾದರಿಯ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಆರಂಭಿಸಲಾಗುತ್ತಿದೆ. ಭಕ್ತರಿಗೆ ನೆರವಾಗುವುದಕ್ಕಾಗಿ, ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾಗುವುದನ್ನು ತಪ್ಪಿಸಿ ಸುಸಜ್ಜಿತ ವ್ಯವಸ್ಥೆ ಒದಗಿಸುವ ದೃಷ್ಟಿಯಿದ ನೂತನ ಸೌಲಭ್ಯ ಕಲ್ಪಿಸಲಾಗುತ್ತಿದೆ
ಮಾದರಿಯಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ಶ್ರೀ ಸಾನಿಧ್ಯ 2,75,177 ಚದರ ಅಡಿಯಲ್ಲಿ ನಿರ್ಮಾಣಗೊಂಡಿದೆ.2 ಅಂತಸ್ಥಿನ ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಒಟ್ಟು 16 ವಿಶಾಲ ಭವನಗಳಿವೆ.ಪ್ರತಿ ಭವನದಲ್ಲಿ ಏಕಕಾಲದಲ್ಲಿ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಸಕಲ ಸೌಕರ್ಯಗಳನ್ನು ನೀಡಲಾಗಿದೆ.
ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಇದೆ.
ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದ 6-7 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.