
ಕಾರ್ಕಳ,ಜೂ.21: ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ತಲ ಪೇಟೆಯಲ್ಲಿರುವ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಅಧಿಕಾರ ದುರುಪಯೋಗ ಕಂಡುಬಂದಿದೆ ಎಂದು ಆರೋಪಿಸಿದ್ದ ಈ ಹಿಂದಿನ ಆಡಳಿತದ ಅವಧಿಯಲ್ಲಿನ ಸದಸ್ಯರು ತಾಲೂಕು ಪಂಚಾಯತ್ ಆಡಳಿತಾಧಿಕಾರಿಯವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಏಲಂ ನಡೆದ ಪ್ರಕ್ರಿಯೆಯ ವರದಿ ಪರಿಶೀಲಿಸಿ ಗ್ರಾಮ ಪಂಚಾಯತ್‌ನ ನಿರ್ಣಯವನ್ನು ಅಮಾನತುಗೊಳಿಸಿ ಮರು ಏಲಂ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರು ಕಳೆದ ಸೆಪ್ಟೆಂಬರ್ 24ರಂದು ಸಲ್ಲಿಸಿದ್ದ ದೂರಿನಲ್ಲಿ, ಪಂಚಾಯತ್‌ಗೆ ಸೇರಿದ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯನ್ನು ಸಾಮಾನ್ಯ ಸಭೆಯ ಗಮನಕ್ಕೆ ತರದೇ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೇ ಆಡಳಿತ ಮಂಡಳಿಯ ಒತ್ತಡದಿಂದ ಏಲಂ ನಡೆಸಲಾಗಿದೆ ಎಂದು ಆರೋಪಿಸಿದ್ದರು.
ಅಂದಿನ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ, ಕೆಲವು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿಕೊಂಡು ಹಿಂದಿನ ಬಾಡಿಗೆದಾರರು ಮತ್ತು ಕೆಲ ಪ್ರಭಾವಿ ವ್ಯಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಂಗಡಿ ಕೋಣೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದೇ, ಈ ಕುರಿತು ಕೋರ್ಟಿಗೆ ಹೋಗಬಹುದು ಎಂಬ ಹಾರಿಕೆಯ ಉತ್ತರ ನೀಡಿದ್ದರು ಎಂದು ಸದಸ್ಯರು ದೂರಿದ್ದರು.
ಇದಾದ ಬಳಿಕ ಸದಸ್ಯರು ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರು ಪ್ರಕರಣದ ಪರಿಶೀಲನೆಗೆ ಸೂಚನೆ ನೀಡಿದ್ದರು.
ಪರಿಶೀಲನೆಯ ವೇಳೆ, 2025ರ ಜೂನ್ 27ರಂದು ಅಂಗಡಿ ಕೋಣೆಗಳ ಏಲಂ ನಡೆಸಿ ಬಾಡಿಗೆದಾರರನ್ನು ಆಯ್ಕೆ ಮಾಡಿ ಕರಾರು ಪತ್ರಗಳನ್ನು ಮಾಡಿಕೊಳ್ಳಲಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಪ್ರಕ್ರಿಯೆಯನ್ನು ಏಲಂ ನಡೆಸುವ ಮೊದಲು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯ ಮುಂದೆ ಮಂಡಿಸಿರಲಿಲ್ಲ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.
ಇದಲ್ಲದೇ, ಏಲಂ ಪ್ರಕ್ರಿಯೆ ನಡೆದ ಸುಮಾರು ಐದು ತಿಂಗಳ ಬಳಿಕ, 2025ರ ನವೆಂಬರ್ 15ರಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂಬ ವಿಚಾರ ಪರಿಶೀಲನೆಯಲ್ಲಿ ಬಹಿರಂಗವಾಗಿದೆ.
ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೇ, ಸೂಚನಾ ಫಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಅಗತ್ಯ ಪ್ರಚಾರ ನಡೆಸದೇ ಏಲಂ ಪ್ರಕ್ರಿಯೆ ಕೈಗೊಳ್ಳಲಾಗಿರುವುದರಿಂದ ಸ್ಪರ್ಧಾತ್ಮಕ ಬಿಡ್‌ಗಳಿಗೆ ಅವಕಾಶ ದೊರಕಿಲ್ಲ. ಇದರ ಪರಿಣಾಮವಾಗಿ ಪಂಚಾಯತ್‌ಗೆ ಹೆಚ್ಚಿನ ಆದಾಯ ದೊರೆಯುವ ಸಾಧ್ಯತೆ ಕುಂಠಿತಗೊಂಡು ಆರ್ಥಿಕ ನಷ್ಟ ಉಂಟಾಗಿರುವ ಸಾಧ್ಯತೆ ಇದೆ ಎಂದು ಸದಸ್ಯರ ಆರೋಪವಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಕಲಂ 237ರ ಅಡಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಕಾರ್ಕಳ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ನಿಶ್ಚಿತ್ ಹೆಗ್ಡೆ ಅವರು, ಕಡ್ತಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ 2025ರ ನವೆಂಬರ್ 15ರಂದು ಕೈಗೊಂಡ ನಿರ್ಣಯ ಸಂಖ್ಯೆ 78/2025-26 ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಂಚಾಯತ್ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ ಅಂಗಡಿ ಕೋಣೆಗಳ ಮರು ಹರಾಜು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
