ಮೂಡಬಿದಿರೆ:ಯಾಂತ್ರಿಕ ಜೀವನದ ಕಡೆಗೆ ಹೆಚ್ಚು ಒಲವನ್ನು ಹೊಂದಿರುವ ಮಾನವ ಶಾರೀರಿಕ ಅಭ್ಯಾಸವನ್ನು ಕಡೆಗಣಿಸುತ್ತಿದ್ದಾನೆ. ಇದರ ಪರಿಣಾಮವಾಗಿ ಅನುಕೂಲದ ಬದಲಾಗಿ ಸಮಸ್ಯೆ ಎದುರಾಗುತ್ತಿದೆ.
ನಮ್ಮ ನಿತ್ಯ ಜೀವನದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲೂ ಆಸೆ ನಿರಾಸೆ, ಜಯ ಅಪಜಯ ಉಂಟಾಗುವುದು ಸಹಜ. ಸುಖದಲ್ಲಿ ಮನಸ್ಸು ಹಿಗ್ಗುತ್ತದೆ. ದುಃಖದಲ್ಲಿ ಮನಸು ಕುಗ್ಗುತ್ತದೆ ಇದು ಪ್ರಕೃತಿಯ ನಿಯಮ. ಇದನ್ನೆಲ್ಲ ಮೀರಿ ಸಮಚಿತ್ತದ ಜೀವನ ನಡೆಸಲು, ಶಾಂತಿ ಸಮಾಧಾನ ಮತ್ತು ಆನಂದದ ಬದುಕು ರೂಪಿಸಲು ಇರುವ ಸಾಧನವೇ ಯೋಗವಿದ್ಯೆ. ಪ್ರತಿ ವ್ಯಕ್ತಿಯು ಶಾರೀರಿಕ,ಮಾನಸಿಕ, ಬೌದ್ಧಿಕ,ನೈತಿಕ ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೊಂದಿ ಸಮಗ್ರ ವಿಕಾಸದ ಗುರಿ ಹೊಂದಲು ಯೋಗ ಅಭ್ಯಾಸವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವುದು ಶ್ರೇಷ್ಠ ಎಂದು ಯೋಗ ಶಿಕ್ಷಕ ಶೇಖರ ಕಡ್ತಲ ಹೇಳಿದರು.
ಅವರು,ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಯೋಗಶ್ರೀ ಯೋಗ ಬಳಗ ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ರಾಮ ಸಭಾಂಗಣ ಗುರುಪುರ ಕೈಕಂಬದಲ್ಲಿ ನಡೆದ 21 ದಿನಗಳ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರದ ಸಮರೋಪ ಕಾರ್ಯಕ್ರಮದಲ್ಲಿ ಯೋಗ ಶಿಬಿರಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಸತೀಶ್ ಶಂಕರ್ ಗಂಜಿಮಠ, ದಿನೇಶ್, ಶಶಿಕಾಂತ್ ಕೈಕಂಬ, ಗಣೇಶ್, ಪೂವಪ್ಪ ಮಳಲಿ ಕ್ರಾಸ್, ಕರುಣಾಕರ್ ಗಂಜಿಮಠ, ಪೂರ್ಣಿಮಾ, ಡಾ.ಸೌಜನ್ಯ ಭಟ್ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಕ್ತದೊತ್ತಡ ಮತ್ತು ಡಯಾಬಿಟಿಸ್ ಪರೀಕ್ಷೆಯನ್ನು ಮಾಡಲಾಯಿತು.ಶಿಬಿರ ಸಂಯೋಜಕ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಗುಣಪಾಲ ಎನ್ ಧನ್ಯವಾದ ಅರ್ಪಿಸಿದರು.