ಬೆಂಗಳೂರು: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಹಾಸನ, ಯಾದಗಿರಿ, ಕಲಬರಗಿ, ಧಾರವಾಡ, ಬೆಳಗಾವಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು, ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕ್ಯಾಸಲ್ರಾಕ್, ಯಲ್ಲಾಪುರ, ಕಾರ್ಕಳ, ಸಿದ್ದಾಪುರ,ಕದ್ರಾ, ಮಂಚಿಕೆರೆ, ಜೋಯಿಡಾ, ಲೋಂಡಾ, ಶೃಂಗೇರಿ, ಕೊಪ್ಪ, ಕೊಲ್ಲೂರು, ಜಯಪುರ, ಲಿಂಗನಮಕ್ಕಿ, ಗೇರುಸೊಪ್ಪ, ಸಿದ್ದಾಪುರ, ಬೆಳ್ತಂಗಡಿ, ತಾಳಗುಪ್ಪ, ಕಮ್ಮರಡಿ, ಕೊಟ್ಟಿಗೆಹಾರ, ಸೋಮವಾರಪೇಟೆ, ಪುತ್ತೂರು, ಧರ್ಮಸ್ಥಳದಲ್ಲಿ ಭಾರೀ ಮಳೆಯಾಗಿದೆ.
ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೆಲ್ಲೀಬಿಡು ಸೇತುವೆ ಮುಳುಗಡೆಯಾಗಿದೆ. ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಕಳಸ ದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಬಂದ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರವಾಹದ ಮಟ್ಟ ಮೀರಿ ಜಾಂಬಳೆ ಹೊಳೆ ಹರಿಯುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ :
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ನದಿ ಬದಿಗೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆ ನೀಡಲಾಗಿದೆ.