Share this news

ಬೆಂಗಳೂರು : ಕರ್ನಾಟಕದಲ್ಲಿ ಬ್ಯಾಂಕ್ ಉದ್ಯೋಗಿಗಳು ಕನ್ನಡ ಕಲಿಯಬೇಕು ಹಾಗೂ ಗ್ರಾಹಕರ ಜೊತೆಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂಬ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ. ಪರಭಾಷೆಯ ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಭಾಷೆಗೆ ಸಂಬಂಧಿಸಿ ವಾಗ್ವಾದಗಳು ನಡೆಯುತ್ತಿರುವ ಮಧ್ಯದಲ್ಲಿ ಇಂಥದೊಂದು ನಿಯಮ ಜಾರಿಯಾಗುವ ಸೂಚನೆ ಸಿಕ್ಕಿದೆ. ಈ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರ ಈ ವರ್ಷದ ಮಾರ್ಚ್ ನಲ್ಲಿ ವಿಧಾನಸಭೆಯಲ್ಲಿ ಕಾನೂನೊಂದಕ್ಕೆ ಅನುಮೋದನೆ ನೀಡಿತ್ತು. ಇದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕಾರ್ಯದರ್ಶಿ ಸಂತೋಷ್ ಹಂಗಲ್ ಮಾಹಿತಿ ನೀಡಿದ್ದಾರೆ.

ಮುಂದಿನ ಕೆಲವೇ ದಿನಗಳಲ್ಲಿ ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಪ್ರಕಾರ 100ಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕ್ ಗಳು ಹಾಗೂ ಖಾಸಗಿ ಕೈಗಾರಿಕೆಗಳು ತಮ್ಮ ಗ್ರಾಹಕರ ಜೊತೆಗೆ ಸುಲಭವಾಗಿ ಸಂಭಾಷಣೆ ನಡೆಸಲು ನೆರವಾಗುವಂತೆ ‘ಕನ್ನಡ ಘಟಕಗಳನ್ನು’ ಸ್ಥಾಪಿಸಬೇಕು. ಹಾಗೆಯೇಉದ್ಯೋಗಿಗಳಿಗೆ ಕನ್ನಡ ಕಲಿಸಲು ‘ಕನ್ನಡ ಕಲಿಕಾ ಘಟಕ’ ಸ್ಥಾಪಿಸಬೇಕು. ಇನ್ನು ಕಾಯ್ದೆ ಪ್ರಕಾರ ಕಲಿಕಾ ಸಿಬ್ಬಂದಿ ಹಾಗೂ ಅಧ್ಯಯನ ಸಾಮಗ್ರಿಗಳ ವೆಚ್ಚವನ್ನು ಬ್ಯಾಂಕ್ ನೋಡಿಕೊಳ್ಳಬೇಕು.ಬ್ಯಾಂಕ್ ಉದ್ಯೋಗಿಗಳು ಕನ್ನಡ ಕಲಿಯಬೇಕು ಎಂಬುದು ಕೆಡಿಎ ದೀರ್ಘಕಾಲದ ಬೇಡಿಕೆಯಾಗಿದೆ. ಭಾಷಾ ತೊಡಕಿನಿಂದ ಗ್ರಾಮೀಣ ಭಾಗದ ಗ್ರಾಹಕರಿಗೆ ಬ್ಯಾಂಕ್ ಜೊತೆಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಅನೇಕ ಬಾರಿ ಇದು ವಾಗ್ವಾದಕ್ಕೂ ಕಾರಣವಾಗುತ್ತಿದೆ. ಏಕೆಂದರೆ ಭಾಷಾ ತೊಡಕಿನಿಂದ ಇಬ್ಬರಿಗೂ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನು ಗ್ರಾಹಕರಿಗೆ ಚಲನ್, ಅರ್ಜಿ ನಮೂನೆಗಳು ಹಾಗೂ ಬ್ಯಾಂಕಿಂಗ್ ದಾಖಲೆಗಳು ಯಾವುವೂ ಕನ್ನಡದಲ್ಲಿರದ ಕಾರಣ ಅರ್ಥೈಸಿಕೊಳ್ಳಲು ಕೂಡ ಕಷ್ಟವಾಗುತ್ತದೆ.

ವರ್ಷದ ನವೆಂಬರ್ 1ಕ್ಕೆ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಪೂರ್ಣಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ, ಹೊರರಾಜ್ಯದವರು ಹಾಗೂ ಹೊರರಾಷ್ಟ್ರದ ನಾಗರಿಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿರೋದಾಗಿ ತಿಳಿಸಿದೆ.

Leave a Reply

Your email address will not be published. Required fields are marked *