ಕಾರ್ಕಳ:ಮನುಷ್ಯನ ಜೀವನದಲ್ಲಿ ಶಿಕ್ಷಣವು ಧನ ಸಂಪಾದನೆಗೆ ಮೂಲವಾದರೆ, ಸಾಹಿತ್ಯವು ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ ಎಂದು ಖ್ಯಾತ ಬರಹಗಾರ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ಹೇಳಿದರು.
ಅವರು ಕಾರ್ಕಳ ತಾಲೂಕಿನ ಹಿರ್ಗಾನದ ಕ್ರಿಯೇಟಿವ್ ಕಾಲೇಜು ಸಭಾಂಗಣದಲ್ಲಿ ಜು.1 ರಂದು ಸೋಮವಾರ ನಡೆದ ಪುಸ್ತಕ ಮನೆ ಪ್ರಕಾಶನದ 15 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕಗಳಿಂದ ಪರಿಪೂರ್ಣ ಜೀವನದ ಪಥವನ್ನು ಬದಲಿಸಲು ಹಾಗೂ ಭಾವ ಜಗತ್ತನ್ನು ವಿಸ್ತರಿಸಲು ಸಾದ್ಯವಿದೆ.ಹಳೆಯ ಕಾಲದಲ್ಲಿ ಅನ್ನದ ಹಸಿವಿತ್ತು. ನಂತರ ಸಮಾನತೆ ಬಳಿಕ ಜ್ಞಾನದ ಹಸಿವು ಅರಂಭವಾಯಿತು. ಆದರೆ ಇಂದಿನ ಕಾಲದಲ್ಲಿ ತಂತ್ರಜ್ಞಾನದ ಕೊರತೆಯು ಯುವ ಸಮುದಾಯವನ್ನು ಕಾಡುತ್ತಿದೆ.ಮಾದ್ಯಮಗಳು ತಂತ್ರಜ್ಞಾನಕ್ಕೆ ಹೊಂದಿಕೊಂಡು ಓದುಗರ ಸಂಖ್ಯೆ ಹೆಚ್ಚಿಸಿವೆ.ಲೇಖಕನ ಮನಸ್ಸಿನ ತೊಳಲಾಟಗಳು ಪುಸ್ತಕದಲ್ಲಿರುತ್ತದೆ. ಪರಿಪಕ್ವ ವಾದ ಸಾಹಿತ್ಯ ವೆನ್ನುವುದು ಲೇಖಕರಿಗೆ ಸಿಗುತ್ತದೆ ಹೊರತು ಎಲ್ಲರಿಗೂ ಸಿಗಲು ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಪುಸ್ತಕಮನೆಯ ಪರಿಕಲ್ಪನೆ ಕ್ರಿಯೆಟಿವ್ ಶಿಕ್ಷಣದೊಂದಿಗೆ ಸಾಹಿತ್ಯ ಬೆಳವಣಿಗೆಗೆ ಪ್ರೇರಣೆ ಯಾಗಿದೆ. ಪುಸ್ತಕಗಳು ಓದುವುದರಿಂದ ಮನಸ್ಸಿಗೆ ಸಂತೋಷ ನೀಡುತ್ತದೆ. ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ. ನನ್ನ ನಿತ್ಯದ ಜೀವನದಲ್ಲಿ ಪುಸ್ತಕ ವನ್ನು ಓದುವ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತಿದ್ದೇನೆ,ವಿದ್ಯಾರ್ಥಿಗಳು ಕೂಡ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ಕಾರ್ಕಳ ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ ಸೃಜನಶೀಲತೆ , ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಾಹಿತ್ಯ ಪುಸ್ತಕಗಳು ಸಹಕಾರಿ ಯಾಗಿವೆ ಎಂದರು.
ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಮಾತನಾಡಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ಪುಸ್ತಕ ಮನೆಯ ಮೊಬೈಲ್ ಬಿಡಿ ಪುಸ್ತಕ ಹಿಡಿ ಯೋಜನೆಯಂತೆ ದಾನಿಗಳ ಸಹಾಯದಿಂದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯ ಪುಸ್ತಕಗಳನ್ನು ಹಂಚಿ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡುತ್ತಿವೆ ಪುಸ್ತಕ ಗಳು ಸಾಹಿತ್ಯದ ನಾವಿನ್ಯತೆಯನ್ನು ಹಂಚುವ ಕೆಲಸ ಮಾಡುತ್ತಿವೆ ಎಂದರು.
ನರೇಂದ್ರ ಪೈಯವರ ಸಾವಿರದೊಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು, ಸುಧಾ ನಾಗೇಶ್ ಅವರ ಹೊಂಬೆಳಕು, ವಾಣಿರಾಜ್‌ರವರ ಸವಿನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರ ಜೀವನಯಾನ, ಅನುಬೆಳ್ಳೆ ಅವರ ನಗುವ ನಯನ ಮಧುರ ಮೌನ, ರಾಮಕೃಷ್ಣ ಹೆಗಡೆಯವರ ಒಲವಧಾರೆ, ಲಕ್ಷ್ಮಣ ಬಜಿಲರ ನಿರ್ವಾಣ, ಅಶ್ವತ್ಥ ಎಸ್. ಎಲ್.ರ ಅರಿವಿನ ದಾರಿ, ರಾಜೇಂದ್ರ ಭಟ್‌ರ ರಾಜಪಥ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ, ಲಲಿತಾ ಮುದ್ರಾಡಿಯವರ ಅರ್ಥವಾಗದವರು, ದಿಗಂತ್ ಬಿಂಬೈಲ್‌ರ ಕೊಂದ್ ಪಾಪ ತಿಂದ್ ಪರಿಹಾರ, ಡಾ. ರಾಜಶೇಖರ್ ಹಳೆಮನೆ ಯವರ ಒಡಲುಗೊಂಡವರು, ಮಹೇಶ್ ಪುತ್ತೂರು ಬರೆದ ವರ್ಣ ಕಾದಂಬರಿ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.
ಕಾಲೇಜು ಸಂಸ್ಥಾಪಕರಾದ , ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ. ಕೆ, , ವಿಮಲ್ ರಾಜ್ ಜಿ, ಗಣಪತಿ ಭಟ್ ಕೆ. ಎಸ್ ಉಪಸ್ಥಿತರಿದ್ದರು.
ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು.