

ಮಂಗಳೂರು, ಅ.,15:ಬಡಗುತಿಟ್ಟು ಯಕ್ಷಗಾನದ ಅನಭಿಷಿಕ್ತ ದೊರೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಹಿರಿಯ ವೇಷಧಾರಿ ಮೇರುಕಲಾವಿದ ಥಂಡಿಮನೆ ಶ್ರೀಪಾದ ಭಟ್(62) ಅ. 15 ರಂದು ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ವಿಧಿವಶರಾಗಿದ್ದಾರೆ. ಈ ಮೂಲಕ ಯಕ್ಷಗಾನದ ಧ್ರುವತಾರೆಯೊಂದು ಅಸ್ತಂಗತವಾಯಿತು.
ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ಬಯಲಾಟ ಮೇಳಗಳಲ್ಲಿಯೂ ವೇಷಧಾರಿಯಾಗಿ ಯಕ್ಷರಂಗದಲ್ಲಿ ಮಿಂಚಿದ ಶ್ರೀಪಾದ ಭಟ್ ಅವರು ಗತ್ತು ಗಾಂಭೀರ್ಯದ ಮೂಲಕ ನಾಯಕ ಮತ್ತು ಖಳ ನಾಯಕ ಸೇರಿದಂತೆ ಎರಡೂ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಅದರಲ್ಲೂ ಪೆರ್ಡೂರು ಮೇಳದಲ್ಲಿ ಹಿರಿಯ ಕಲಾವಿದನಾಗಿ ವಿಶಿಷ್ಟ ಛಾಪು ಮೂಡಿಸಿದ್ದರು.
ಶ್ರೀಪಾದ್ ಭಟ್ ಇತ್ತೀಚಿನ ದಿನಗಳಲ್ಲಿ ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದು ಮತ್ತೆ ಯಕ್ಷಗಾನ ರಂಗಕ್ಕೆ ಮರಳುವ ಮಹದಾಸೆ ಹೊಂದಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಅಗಲುವಿಕೆ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಬಡಗುತಿಟ್ಟಿನ ಮೇರು ಕಲಾವಿದರ ಒಡನಾಡಿಯಾಗಿದ್ದ ಥಂಡಿಮನೆ ಶ್ರೀಪಾದ ಭಟ್ ಅವರಿಗೆ ಪೌರಾಣಿಕ ಪ್ರಸಂಗದ ಯಾವುದೇ ಪಾತ್ರ ನಿರ್ವಹಿಸುವ ಶಕ್ತಿ ಇತ್ತು. ಆಳಂಗ, ಕಂಚಿನ ಕಂಠ, ಹಿತಮಿತವಾದ ಕುಣಿತ, ಪಾತ್ರಕ್ಕೆ ಬೇಕಾದ ಪರಿಪೂರ್ಣ ಅರ್ಥಗಾರಿಕೆ ಅವರ ಹೆಚ್ಚುಗಾರಿಕೆಯಾಗಿತ್ತು.
ಭೀಷ್ಮ,ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿ ಅನೇಕ ನೂತನ ಪ್ರಸಂಗಗಳ ಪಾತ್ರಗಳಿಗೆ ಜೀವ ತುಂಬಿದ್ದರು. ಶ್ರೀಪಾದ ಭಟ್ ಅವರು ತಂದೆ, ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.
ಥಂಡಿಮನೆ ಅವರ ಅಗಲುವಿಕೆಗೆ ಯಕ್ಷಗಾನ ರಂಗದ ಅನೇಕ ಕಲಾವಿದರು, ಕಲಾಪ್ರೇಮಿಗಳು ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ ಥಂಡಿಮನೆಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
