

ಕುಂದಾಪುರ, ಅ.14: ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಂಭ್ರಮ ಹಾಗೂ ಜನದಟ್ಟಣೆಯಿಂದ ಕೂಡಿದ್ದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಾಣಿಜ್ಯ ಸಂಕೀರ್ಣದ ಮಹಡಿಗೆ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಗಾಳಿಯ ರಭಸಕ್ಕೆ ಏಕಾಏಕಿ ಭಕ್ತರ ಮೇಲೆ ಉರುಳಿಬಿದ್ದ ಪರಿಣಾಮ, ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬಲವಾದ ಗಾಳಿ ಬೀಸಿದ ಪರಿಣಾಮ ದೇವಸ್ಥಾನದ ಎದುರಿಗಿರುವ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಭಕ್ತರ ಮೇಲೆ ಉರುಳಿಬಿದ್ದಿದೆ. ಮಧ್ಯಾಹ್ನದ ಅವಧಿಯಲ್ಲಿ ಭಕ್ತರು ಬಿಸಿಲಿನಿಂದ ರಕ್ಷಣೆ ಪಡೆಯಲು ವಾಣಿಜ್ಯ ಸಂಕೀರ್ಣದ ನೆರಳಿನಲ್ಲಿ ನಿಂತಿದ್ದರು. ಲೈಟ್ ಸೆಟ್ ಬೀಳುತ್ತಿದ್ದಂತೆ ಹೆಚ್ಚಿನ ಭಕ್ತರು ತಕ್ಷಣವೇ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಮೂವರು ಭಕ್ತರು ಇದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಒಬ್ಬ ವೃದ್ಧ ಭಕ್ತನ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ಅಂಗಡಿಕಾರರು ಹಾಗೂ ಸಾರ್ವಜನಿಕರು ಧಾವಿಸಿ ಬಂದು, ಬಿದ್ದಿದ್ದ ಲೈಟ್ ಸೆಟ್ ಅನ್ನು ಪಕ್ಕಕ್ಕೆ ಸರಿಸಿ ಸಿಲುಕಿಕೊಂಡವರನ್ನು ರಕ್ಷಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
