
ಬೆಂಗಳೂರು,ಜೂ.19: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎನ್ನುವ ನಿಯಮಾವಳಿಯ ಬದಲು ಫಲಾನುಭವಿಗಳ ಕುರಿತು ಮರು ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.
ಯೋಜನೆಗಳ ಮುಂದುವರಿಕೆ ಹಾಗೂ ಪರಿಷ್ಕರಣೆಗಾಗಿ ಫಲಾನುಭವಿಗಳು ಮತ್ತೆ ಸರತಿ ಸಾಲಿನಲ್ಲಿ ನಿಂತು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು ಇದರಿಂದ ಫಲಾನುಭವಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.
ಸಿಎಂ ಡಿ.ಕೆ ಶಿವಕುಮಾರ್ ಅವರು, ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ಬದಲು, ಸದ್ಯ ಸೌಲಭ್ಯ ಪಡೆಯುತ್ತಿರುವವರ ಪಟ್ಟಿಯನ್ನೇ ಮರುಪರಿಶೀಲನೆ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಪ್ರಸ್ತುತ ಇರುವ ಫಲಾನುಭವಿಗಳ ಅರ್ಹತೆಯನ್ನು ತಳಮಟ್ಟದಲ್ಲಿ ಹೇಗೆ ಮತ್ತು ಯಾರು ಪರಿಶೀಲಿಸಬೇಕು ಎನ್ನುವುದರ ಕುರಿತು ಮೂರು ದಿನಗಳ ಒಳಗೆ ಸಮಗ್ರ ನೀತಿ-ನಿಯಮಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾದಾಗ, ಬ್ಯಾಂಕ್ ಸಾಲ ಹೊಂದಿದ್ದ ಮಹಿಳೆಯರ ಹಣವನ್ನು ಬ್ಯಾಂಕುಗಳು ಸಾಲದ ಮೊತ್ತಕ್ಕೆ ಕಡಿತ ಮಾಡಲಾಗುತ್ತಿತ್ತು. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅನೇಕ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಇಂತಹ ತಾಂತ್ರಿಕ ಬದಲಾವಣೆ ಮಾಡಿಕೊಂಡಿರುವ ಯಾವುದೇ ನೈಜ ಫಲಾನುಭವಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಸೂಚಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾಸಿಕ ಧನಸಹಾಯ ಮಹಿಳೆಯರ ಖಾತೆಗೆ ತಲುಪಿದ ತಕ್ಷಣ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಯ್ಸ್ ಮೆಸೇಜ್ ಕಳುಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಬ್ಯಾಂಕಿಗೆ ಅಲೆಯುವ ಅಗತ್ಯವಿಲ್ಲದೇ ತಮಗೆ ಹಣ ಬಂದಿರುವುದನ್ನು ಮಹಿಳೆಯರು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
