ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಕಾಡುಹೊಳೆಯ ವೇ.ಮೂ. ವೆಂಕಟರಮಣ ಭಟ್ (84)(ಬಂಗಾರ್ ಭಟ್ರು) ಗುರುವಾರ ಮಧ್ಯಾಹ್ನ ಮಣಿಪಾಲದ ಆಸ್ಪತೆಯಲ್ಲಿ ನಿಧನರಾದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಡುಹೊಳೆ, ಅಜೆಕಾರು ಮುನಿಯಾಲು ಸುತ್ತಮುತ್ತಲಿನ ಪರಿಸರದಲ್ಲಿ ವೆಂಕಟರಮಣ ಭಟ್ ಅವರು ಬಂಗಾರ್ ಭಟ್ರು ಎಂದೇ ಚಿರಪರಿಚಿತರಾಗಿದ್ದರು. ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ ಸುಮಾರು 65 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ತನ್ನ ಇಳಿ ವಯಸ್ಸಿನಲ್ಲಿಯೂ ದೇವರ ಪೂಜಾ ಕೈಂಕರ್ಯ, ಮನೆಯಲ್ಲಿ ಕೃಷಿ ಚಟುವಟಿಕೆ, ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದಲ್ಲದೇ ಕಾಡುಹೊಳೆ ಪರಿಸರದ ಸುತ್ತಮುತ್ತಲಿನ ಯಾವುದೇ ಮನೆಯಲ್ಲಿ ಏನೇ ಶುಭ ಕಾರ್ಯಕ್ರಮಗಳಿದ್ದರೂ ಆ ಕಾರ್ಯಕ್ರಮಗಳಿಗೆ ಬಂಗಾರ್ ಭಟ್ರ ಉಪಸ್ಥಿತಿ ಇರಲೇಬೇಕಿತ್ತು. ಅರ್ಚಕರಾಗಿ ನಡೆ,ನುಡಿಯಲ್ಲಿ ಚಿನ್ನದಂತಹ ಗುಣವಿದ್ದ ಕಾರಣಕ್ಕಾಗಿ ಹಿರಿಯರು ಬಂಗಾರ್ ಭಟ್ರು ಎಂದೇ ಗೌರವ ಸೂಚಕವಾಗಿ ಕರೆಯುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ