ಕಾರ್ಕಳ: ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಗೆ ಈಗಾಗಲೇ ದಿನಾಂಕ ಪ್ರಕಟವಾಗಿದ್ದು, ಏ 26ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೂ ಮುನ್ನವೇ ಕಾರ್ಕಳ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಕುರಿತು ಬಿಜೆಪಿ ಬೆಳವಣೆಗೆಯ ಕುರಿತು ಕಾದು ನೋಡುವ ತಂತ್ರ ಅನುಸರಿಸಿತ್ತು. ಬಿಜೆಪಿಯ ಬಂಡಾಯದ ಬೇಗುದಿ ಶಮನವಾಗದ ಹಿನ್ನಲೆಯಲ್ಲಿ ಇದರ ಲಾಭ ಪಡೆದ ಕಾಂಗ್ರೆಸ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯನ್ನೇ ಹೈಜಾಕ್ ಮಾಡಿ ತನ್ನ ಬೆಂಬಲಿತ ಅಧ್ಯರ್ಥಿಯಾಗಿ ಕಣಕ್ಕಿಳಿಸಿ ಬಿಜೆಪಿಗೆ ಪ್ರಬಲ ಆಘಾತ ನೀಡಿದೆ.
ದ.ಕ ಹಾಲು ಒಕ್ಕೂಟಕ್ಕೆ ಉಡುಪಿ ಜಿಲ್ಲೆಯಿಂದ 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿತ್ತು, ಈ ಪೈಕಿ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ 2 ಸ್ಥಾನ ನಿಗದಿಯಾಗಿದೆ. ಆದರೆ ಬಿಜೆಪಿಯಿಂದ 5 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದ ಹಿನ್ನಲೆಯಲ್ಲಿ 2 ಸ್ಥಾನಗಳಿಗೆ ಪಕ್ಷದೊಳಗೆ ತೀವೃ ಸ್ಪರ್ಧೆ ನಡೆದಿತ್ತು. ಸಾಣೂರು ನರಸಿಂಹ ಕಾಮತ್, ಬೋಳ ಸದಾಶಿವ ಶೆಟ್ಟಿ, ಉದಯ ಎಸ್.ಕೋಟ್ಯಾನ್, ಕಾಂತಾವರ ಮೋಹನ್ ದಾಸ್ ಅಡ್ಯಂತಾಯ ಹಾಗೂ ಹೆಬ್ರಿ ಭೋಜ ಪೂಜಾರಿ ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಬಜೆಪಿ ನಾಯಕರು ಅಳೆದುತೂಗಿ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನಿಂದ ಕಾಂತಾವರ ಮೋಹನ್ ದಾಸ್ ಅಡ್ಯಂತಾಯ ಹಾಗೂ ಹೆಬ್ರಿ ತಾಲೂಕಿನಿಂದ ್ರ ಭೋಜ ಪೂಜಾರಿಯವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿತ್ತು. ಇತ್ತ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುತ್ತಿದ್ದAತೆಯೇ ಆಕಾಂಕ್ಷಿಗಳಾಗಿದ್ದ ರಾಜ್ಯ ಸಹಕಾರ ಭಾರತಿಯ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಪಕ್ಷದ ಹಿತದೃಷ್ಟಿಯಿಂದ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಬೋಳ ಸದಾಶಿವ ಶೆಟ್ಟಿ ಉಮೇದುವಾರಿಕೆ ಸಲ್ಲಿಸಲು ಉತ್ಸುಕರಾಗಿದ್ದರೂ ಅವರನ್ನು ಸಹಕಾರಿ ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಅವರು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಆದರೆ ಪ್ರಬಲ ಆಕಾಂಕ್ಷಿಯಾಗಿದ್ದ ಹಾಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉದಯ ಎಸ್.ಕೋಟ್ಯಾನ್ ತನಗೆ ಅವಕಾಶ ನೀಡುವಂತೆ ಬಿಗಿಪಟ್ಟು ಹಿಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಒಪ್ಪದ ಹಿನ್ನಲೆಯಲ್ಲಿ ಇದರ ಲಾಭ ಪಡೆದ ಕಾಂಗ್ರೆಸ್ ಉದಯ ಕೋಟ್ಯಾನ್ ಅವರಲ್ಲಿ ಮಾತುಕತೆ ನಡೆಸಿ ಕೊನೆಗೂ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಈ ಕುರಿತು ಉದಯ ಕೋಟ್ಯಾನ್ ಅವರು ಕರಾವಳಿನ್ಯೂಸ್ ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆಇನೋರ್ವ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಮುಡಾರು ಸುಧಾಕರ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದರೆ, ಇತ್ತ ಕಾಂಗ್ರೆಸ್ ಪಕ್ಷಕ್ಕೆ ಸ್ಪರ್ಧಿಸಲು ಅಭ್ಯರ್ಥಿಯೇ ಇಲ್ಲ ಎನ್ನುವಂತಾಗಿ,ಕೊನೆಗೆ ಬಜೆಪಿಯ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್ ಕಾರ್ಯರ್ಕರಲ್ಲಿ ಭಾರೀ ಅಸಮಾಧಾನಕ್ಕೂ ಕಾರಣವಾಗಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡದೇ ಬಿಜೆಪಿಯ ಅಭ್ಯರ್ಥಿಗೆ ಮಣೆ ಹಾಕಿರುವುದಕ್ಕೆ ನಿಷ್ಟಾವಂತ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯ ಬಂಡಾಯ ಪಕ್ಷಕ್ಕೆ ಮುಳುವಾಗಲಿದೆಯೇ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆಯೋ ಎನ್ನುವುದನ್ನು ಏ.26ರಂದು ನಡೆಯುವ ಚುನಾವಣೆಯ ತನಕ ಕಾದುನೋಡಬೇಕಿದೆ.