ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಬೆಳ್ಮಣ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಕಾರ್ಕಳ ಶಾಸಕರಾದ ವಿ ಸುನಿಲ್‌ಕುಮಾರ್ ರವರ ವಿಶೇಷ ಮುತುವರ್ಜಿಯಲ್ಲಿ ಸಂಸದರು ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಅನುದಾನ ಕೋರಿ ಮನವಿ ಸಲ್ಲಿಸಿದ್ದರು.
ಇದೀಗ ಶಾಸಕರ ಮನವಿಗೆ ಪೂರಕವಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಕೇಶವ್ ಪ್ರಸಾದ್ ಎಸ್. ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.10.00 ಲಕ್ಷ ಹಾಗೂ ಶ್ರೀಮತಿ ಹೇಮಲತಾ ನಾಯಕ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.05.00 ಲಕ್ಷ ಅನುದಾನವನ್ನು ಒದಗಿಸಲಾಗಿದೆ. ಈಗಾಗಲೇ ರಾಜ್ಯಸಭಾ ಸದಸ್ಯರಾದ ಕೆ. ನಾರಾಯಣ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 20.00 ಲಕ್ಷ ಅನುದಾನ ಒದಗಿಸಲಾಗಿದೆ.
ಬೆಳ್ಮಣ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣದಿಂದಾಗಿ ಬೆಳ್ಮಣ್ ಹಾಗೂ ಆಸುಪಾಸಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಕಾರ್ಕಳ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.