ಕಾರ್ಕಳ: ಮುಂಗಾರುಪೂರ್ವ ಮಳೆ ಭಾರೀ ಆವಾಂತರ ಸೃಷ್ಟಿಸುತ್ತಿದ್ದು, ಕಾರ್ಕಳ ತಾಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಪ್ರವಾಹದ ನೀರು ಕೃಷಿ ಜಮೀನಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಕಾರ್ಕಳ ತಾಲೂಕಿನ ನಿಂಜೂರು ಗ್ರಾಮದ ಪಾತಾವು ನಿವಾಸಿ ಸುಶೀಲಾ ಎಂಬಬವರ ವಾಸದ ಮನೆ ಭಾರೀ ಗಾಳಿ ಮಳೆಗೆ ಭಾಗಶಃ ಹಾನಿಯಾಗಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ. ನಿಟ್ಟೆ ಗ್ರಾಮದ ಅಂಬಡೆಕಲ್ಲು ನಿವಾಸಿ ಇಂದಿರಾ ಅವರ ಮನೆಗೆ ಮಳೆಯಿಂದ ಹಾನಿಯಾಗಿದ್ದು 30 ಸಾವಿರ ನಷ್ಟ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ನೇರಳೆಪಲ್ಕೆ ಕುಲ್ಸು ಎಂಬವರ ಮನೆಯ ಛಾವಣಿಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ 7 ಸಾವಿರ ನಷ್ಟ ಸಂಭವಿಸಿದೆ. ಪೊಸನೊಟ್ಟು ಸತೀಶ್ ಎಂಬವರ ಮನೆಯ ಛಾವಣಿಯ ಸಿಮೆಂಟ್ ಶೀಟ್ ಹಾರಿ ಹೋಗಿ 2500 ಸಾವಿರ ನಷ್ಟ ದಂಭವಿಸಿದೆ.
ಕಾರ್ಕಳದ ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ತೋಡಿನ ನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ತೋಡಿನಲ್ಲಿದ್ದ ಕಲ್ಲುಗಳನ್ನು ತೆರವುಗೊಳಿಸಿದ ಪರಿಣಾಮ ಪ್ರವಾಹ ಇಳಿಕೆಯಾಗಿದೆ.
ಕಾರ್ಕಳದ ಮುಂಡ್ಲಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು ಜಲಾಶಯದ ಕ್ರಸ್ಟ್ ಗೇಟ್ ಮೇಲ್ಭಾಗದಿಂದ ನೀರು ಹರಿಯುತ್ತಿದ್ದು ಪಕ್ಕದ ಪಂಪ್ ಹೌಸ್ ಹಾಗೂ ಅಡಿಕೆ ತೋಟಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಕೆರ್ವಾಶೆ ಬಜಗೋಳಿ ಸಂಪರ್ಕಿಸುವ ಮುಡಾರಿನ ಬಟ್ಟಹೊಳೆಗೆ ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯದ ಪರಿಣಾಮ ಭಾರೀ ಪ್ರವಾಹ ಕೃಷಿ ಜಮೀನಿಗೆ ನುಗ್ಗಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹಲಗೆಗಳನ್ನು ತೆರವು ಮಾಡಲು ಸೂಚಿಸಿದ್ದಾರೆ. ಮಾಳ ಗ್ರಾಮದ ಮುಳ್ಳೂರು ಚೆಕ್‌ಪೋಸ್ಟ್ ಬಳಿಯ ಘಾಟಿಯಲ್ಲಿ 5 ಕಡೆಗಳಲ್ಲಿ ಗುಡ್ಡ ಕುಸಿದು ಮರ ಹಾಗೂ ಮಣ್ಣು ರಸ್ತೆ ಬಿದ್ದಿದ್ದು ಅರಣ್ಯ ಅಧಿಕಾರಿಗಳ ಕೂಡಲೇ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ