ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಅಕ್ಷರಾಭ್ಯಾಸವನ್ನು ಪೋಷಕರು ಅಕ್ಕಿ ಧಾನ್ಯದಲ್ಲಿ ಅರಸಿನ ಕೋಡು ಬಳಸಿ ಮಕ್ಕಳಿಗೆ ನೆರವೇರಿಸಿದರು.
ವಿದ್ಯಾಧಿದೇವತೆಯಾದ ಸರಸ್ವತಿ ಪೂಜೆಯನ್ನು ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನೆರವೇರಿಸಿ ಮಾತನಾಡಿ ಮನುಷ್ಯನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಂಸ್ಕಾರವನ್ನು ಪಡೆಯಬೇಕು. ಆದ್ದರಿಂದ ಬಾಲ್ಯದಲ್ಲೇ ಕಾಲೋಚಿತ ಸಂಸ್ಕಾರವನ್ನು ಹೆತ್ತವರು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಶಕ್ತಿ , ಮೇಧಾ ಶಕ್ತಿ , ಪ್ರಜ್ಞಾ ಶಕ್ತಿಯನ್ನು ಪಡೆಯಬೇಕಾದರೆ ಅಕ್ಷರಾಭ್ಯಾಸ ಸಂಸ್ಕಾರ ಅತ್ಯಗತ್ಯ. ಆದ್ದರಿಂದ ಸರಸ್ವತಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದರೆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮೃತಭಾರತಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಅರುಣ್ ಕುಮಾರ್, ಅನಿತಾ ಮಾತಾಜಿ, ಅಪರ್ಣಾ ಆಚಾರ್, ಶಕುಂತಲಾ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ್ ಶೆಟ್ಟಿ , ಪೋಷಕರು, ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು