ಕುಂದಾಪು: ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ, ಕಮಲಶಿಲೆ ಭಾಗದಲ್ಲಿ ಆತಂಕ ಹುಟ್ಟಿಸಿದ್ದ ಎಂಟ್ರಿ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ. ಎರಡು ದಿನಗಳ ಕಾಲ ಕಣ್ಣಿಗೆ ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸಿದ್ದ ವಲಯ ಅರಣ್ಯ ಅಧಿಕಾರಿಗಳ ಶ್ರಮಕ್ಕೆ ಕೊನೆಗೂ ಫಲಸಿಕ್ಕಿದೆ.
ಹಾಸನ ಜಿಲ್ಲೆಯ ಭದ್ರ ವೈಲ್ಡ್ ಲೈಫ್‌ನಿಂದ ದಾರಿ ತಪ್ಪಿ ಶಿವಮೊಗ್ಗ ಜಿಲ್ಲೆಯ ಮೂಲಕ ಉಡುಪಿ ಜಿಲ್ಲೆಯ ಗಡಿಯೊಳಗೆ ನುಸುಳಿದ್ದ ಒಂಟಿ ಸಲಗ ಗ್ರಾಮದೊಳಗೆ ಓಡಾಡಿಕೊಂಡಿತ್ತು. ಕೊನೆಗೆ ಜನರ ಇರುವಿಕೆ ಹೆಚ್ಚಾದಂತೆ ಕಾಡಿನೊಳಗೆ ಅವಿತಿದ್ದ ಈ ಕಾಡಾನೆ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಎಷ್ಟೇ ಹುಡುಕಾಡಿದರೂ ಆನೆ ಇರುವ ಸ್ಥಳ ಬಿಟ್ಟರೆ, ಆನೆಯ ಇರುವಿಕೆ ರಾತ್ರಿ ಮಾತ್ರ ಕಾಣಿಸುತ್ತಿತ್ತು. ಕೊನೆಗೆ ವಲಯ ಅರಣ್ಯ ಅಧಿಕಾರಿಗಳು ಒಂಟಿ ಸಲಗವನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಾರೆ.
ಎರಡು ದಿನಗಳ ಕಾರ್ಯಾಚರಣೆಗೆ ಮುಂದಾದ ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆಬಿಡಾರದಿಂದ ಬಾಲಚಂದ್ರ, ಸೋಮಣ್ಣ ಮತ್ತು ಬಹದ್ದೂರ್ ಆನೆಗಳನ್ನು ಕರೆಸಿಕೊಂಡಿದ್ದಾರೆ. ಹೀಗೆ ಆನೆಗಳನ್ನ ಕರೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಕಾಡಾನೆಯನ್ನು ಹತೋಟಿಗೆ ತಂದಿದ್ದಾರೆ. ಬಳಿಕ ಆನೆಯನ್ನ ಕ್ರೇನ್ ಮೂಲಕ ಎತ್ತಿ ಲಾರಿಯಲ್ಲಿ ಇಳಿಸಿ ಸಕ್ರೆಬೈಲಿಗೆ ಮೂರು ಆನೆಗಳ ಜೊತೆ ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ ಎರಡು ದಿನಗಳ ಆಪರೇಷನ್ ಒಂಟಿ ಸಲಗ ಯಶಸ್ವಿಯಾಗಿದ್ದು, ಸಿದ್ದಾಪುರ, ಕಮಲಶಿಲೆ, ಹೊಸಂಗಡಿ ನಿವಾಸಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.