Share this news

ಹಾಸನ: ತನ್ನ ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂದು ಸಿಟ್ಟಿನಿಂದ ತನ್ನ ಗಂಡ‌, ಮಕ್ಕಳು, ಅತ್ತೆ ಮತ್ತು ಮಾವನಿಗೆ ಸೊಸೆ ಅನ್ನದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಭಯಾನಕ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿದೆ.
ವಿಷ ಹಾಕಿದ್ದ ಹಾದರಗಿತ್ತಿ ಚೈತ್ರಾಳನ್ನು (33) ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆರಳೂರು ಗ್ರಾಮದ ಗಜೇಂದ್ರ ಹಾಗೂ ಚೈತ್ರಾ ದಂಪತಿಗೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ.

ಇತ್ತೀಚಿಗೆ ಪತ್ನಿ ಚೈತ್ರಾ ಅತಿಯಾಗಿ ಮೊಬೈಲ್ ನಲ್ಲಿ ಮಾತನಾಡುವುದು,ಚಾಟಿಂಗ್ ಮಾಡುವ ವಿಷಯ ಗಂಡ ಗಜೇಂದ್ರನಿಗೆ ಅನುಮಾನ ತರಿಸಿದೆ. ಈ ಕುರಿತು ವಿಚಾರಿಸಿದಾಗ ಸ್ಥಳೀಯ ಯುವಕನ ಜೊತೆ ಪತ್ನಿ ಪರಸಂಗ ಹೊಂದಿರುವುದು ತಿಳಿದಿದೆ. ಕೂಡಲೇ ಎಚ್ಚೆತ್ತ ಗಜೇಂದ್ರ, ಚೈತ್ರಾಳ ತವರು ಮನೆಯವರಿಗೆ ಈ ವಿಚಾರ ತಿಳಿಸಿದ್ದಾನೆ. ರಾಜಿ ಸಂಧಾನಕ್ಕೆ ಕೂತಾಗ, ನಾನು ತಪ್ಪು ಮಾಡಿದೆ. ಇನ್ಮುಂದೆ ಹೀಗಾಗಲ್ಲ ಎಂದು ಚೈತ್ರಾ ಬೇಡಿಕೊಂಡಿದ್ದಾಳೆ. ಆಗ, ಗಜೇಂದ್ರ ಮಕ್ಕಳಿಗಾಗಿ ಮತ್ತೆ ಪತ್ನಿ ಚೈತ್ರಾ ಜೊತೆ ಸಂಸಾರ ಆರಂಭಿಸಿದ್ದಾರೆ. ಆದರೆ, ಕೆಲ ತಿಂಗಳ ನಂತರ ಚೈತ್ರಾ ಪಕ್ಕದ‌ ಮನೆಯ ಶಿವು ಎಂಬುವನ ಜೊತೆ ಗೆಳೆತನ ಮಾಡಿದ್ದಾಳೆ. ವಿಚಾರ ಗೊತ್ತಾಗಿ ಪ್ರಶ್ನೆ ಮಾಡಿದಾಗ, ಚೈತ್ರಾ ಮನೆಯಲ್ಲಿ ಗಲಾಟೆ ಮಾಡಿದ್ದಾಳೆ.

ಮಾತ್ರವಲ್ಲದೇ ಆಕೆಯ ಪ್ರಿಯಕರ ಶಿವು ಜತೆ ಸೇರಿ ಚೈತ್ರಾ ಗಂಡನ ವಿರುದ್ಧ ದೌರ್ಜನ್ಯ ದೂರು ನಡುವೆ ನೀಡಿ ಗಜೇಂದ್ರನನ್ನು ಜೈಲಿಗೆ ಕಳಿಸಿದ್ದಳು. ಆದರೆ, ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಗಜೇಂದ್ರನಿಗೆ ಏಕಾಎಕಿ ಆರೋಗ್ಯ ಕೈ ಕೊಡಲು ಶುರುವಾಗಿದೆ. ಬಳಲಿಕೆ, ಸುಸ್ತು, ನಿತ್ರಾಣ, ಅತಿಯಾದ ನಿದ್ರೆ ಹೀಗೆ ಹತ್ತಾರು ಸಮಸ್ಯೆ ಶುರುವಾಗಿದೆ.

ಏನಾಯಿತು ಅಂತ ಗಜೇಂದ್ರ ಆತಂಕದಲ್ಲಿರುವಾಗಲೇ, ಚೈತ್ರಾ ಮನೆಯಲ್ಲಿ ಮತ್ತೆ ಜಗಳ ತೆಗೆದು ತವರು ಮನೆಗೆ ಹೊರಡಲು ಮುಂದಾಗಿದ್ದಾಳೆ. ಈ ವೇಳೆ, ಚೈತ್ರಾಳ ಬ್ಯಾಗ್ ಪರಿಶೀಲನೆ ನಡೆಸಿದಾಗ ಸತ್ಯ ಬಯಲಾಗಿದೆ. ಕದ್ದು ಮುಚ್ಚಿ ಮಾತನಾಡಲು ಮೊಬೈಲ್, ಬ್ಯಾಗ್ ಒಳಗೆ ಮಾತ್ರೆಗಳು ಸಿಕ್ಕಿವೆ. ಇವೆಲ್ಲವನ್ನೂ ತೆಗೆದುಕೊಂಡು ಗಜೇಂದ್ರ, ಪತ್ನಿ ಚೈತ್ರಾಳನ್ನು ಬಿಟ್ಟು ಒಬ್ಬರೇ ವೈದ್ಯರ ಬಳಿಗೆ ಹೋಗಿದ್ದಾರೆ.

ಈ ಮಾತ್ರೆಗಳು ಆರೋಗ್ಯವಂತರು ಬಳಸುವುದಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಮಾತ್ರೆಗಳನ್ನು ತಿಂಗಳುಗಳಿಂದ ಸ್ವಲ್ಪ ಸ್ವಲ್ಪವೇ ಗಂಡ, ಮಕ್ಕಳು, ಅತ್ತೆ ಮತ್ತು ಮಾವನಿಗೆ ನೀಡಿದ್ದ ಚೈತ್ರಾ ತನ್ನ ಗಂಡ, ಮಕ್ಕಳು ಸೇರಿದಂತೆ ಎಲ್ಲರನ್ನೂ ಮುಗಿಸುವ ಪ್ಲಾನ್ ಮಾಡಿದ್ದಳು ಎಂಬ ಭಯಾನಕ ಸತ್ಯ ಹೊರಬಿದ್ದಿದೆ. ಕೂಡಲೇ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಾದ ಗಜೇಂದ್ರ, ಇತನ ಮಕ್ಕಳು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಹೊರ ಬಂದಿದ್ದಾರೆ. ಬೇಲೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆ ಯತ್ನ ಕೇಸ್​ನಲ್ಲಿ ಚೈತ್ರಾ ಜೈಲು ಪಾಲಾಗಿದ್ದಾಳೆ. ಚೈತ್ರಾ ಪ್ರಿಯಕರ ಶಿವು ವಿರುದ್ಧವೂ ಕೇಸ್ ದಾಖಲಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

 

 

 

 

 

Leave a Reply

Your email address will not be published. Required fields are marked *