ಕಾರ್ಕಳ:ನಮ್ಮ ಜೀವನದಲ್ಲಿ ಕೇವಲ ವಿದ್ಯಾಭ್ಯಾಸ ಇದ್ದರೆ ಸಾಲದು, ಇದರ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಅಳವಡಿಸಿಕೊಂಡಾಗ ಬದುಕಿಗೆ ಅರ್ಥ ಬರುತ್ತದೆ. ಕಾರ್ಕಳದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜತೆಜತೆಗೆ ಬದುಕಿನ ಮೌಲ್ಯಗಳನ್ನು ಮನವರಿಕೆ ಮಾಡುವ ಮೂಲಕ ಜ್ಞಾನಸುಧಾ ವಿದ್ಯಾರ್ಥಿಗಳ ಪಾಲಿನ ಅದ್ಭುತ ಜ್ಞಾನ ಭಂಡಾರವಾಗಿದೆ ಎಂದು ಎಂಜಿಆರ್ ಗ್ರೂಪ್‌ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಕಾಲೇಜು ಕ್ಯಾಂಪಸ್‌ನಲ್ಲಿ ಡಿ.22 ರಂದು ಭಾನುವಾರ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ, ರಾಷ್ಟ್ರೀಯ ಗಣಿತ ದಿನಾಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ಜೀವನದಲ್ಲಿ ನಾವು ಸಾಗಿಬಂದ ಹಾದಿಯನ್ನು ಮರೆಯಬಾರದು.ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದರೆ ಸಾಲದು ಇದರ ಜತೆಗೆ ಜೀವನದಲ್ಲಿ ಶಿಸ್ತು,ಸರಳತೆ,ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ನಿರಂತರ ಪರಿಶ್ರಮವೇ ಯಶಸ್ಸಿನ ಗುಟ್ಟು: ಪ್ರಸನ್ನ ,ಎಚ್ IAS
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕ ಪ್ರಸನ್ನ ಹೆಚ್,IAS, ಮಾತನಾಡಿ, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ವಿದ್ಯಾರ್ಥಿ ಜೀವನದಲ್ಲಿ ಕೇವಲ ನೀವು ಹಾಕಿಕೊಂಡ ಗುರಿಯತ್ತ ಮಾತ್ರವೇ ನಿಮ್ಮ ಗಮನ ಇರಬೇಕು. ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಯದ ಪರಿಪಾಲನೆ ಬಹಳ ಮುಖ್ಯ ವಾಗಿರುತ್ತದೆ,ದಿನಕ್ಕೆ ಕನಿಷ್ಠ 10 ಗಂಟೆಗಳನ್ನು ಏಕಾಗ್ರತೆಯಿಂದ ಓದಿಗಾಗಿ ಮೀಸಲಿಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಧಾರೆ ಎರೆದಿದೆ: ಶಾಸಕ ಸುನಿಲ್ ಕುಮಾರ್
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ಶಿಕ್ಷಣ ಕ್ಷೇತ್ರ ಕೂಡ ವ್ಯಾವಹಾರಿಕ ಕ್ಷೇತ್ರವಾಗಿದೆ.ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಕಷ್ಟವೇನಲ್ಲ,ಆದರೆ ವಿಧ್ಯಾರ್ಥಿಗಳಿಗೆ ಸಂಸ್ಕಾರ, ಜೀವನದ ಮೌಲ್ಯಗಳನ್ನು ಬೋಧಿಸುವುದು ಅಷ್ಟು ಸುಲಭವಲ್ಲ.ಮಕ್ಕಳು ಕೇವಲ ವಿದ್ಯೆ ಕಲಿತರೆ ಸಾಲದು ವಿದ್ಯೆಯ ಜತೆ ವಿನಯತೆ,ಉತ್ತಮ ಸಂಸ್ಕಾರ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮಾದರಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಇದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಬಂದ ಗಳಿಕೆಯ ಪಾಲನ್ನು ಮರಳಿ ಸಮಾಜಕ್ಕೆ ನೀಡುವ ಸುಧಾಕರ ಶೆಟ್ಟಿಯವರ ಔದಾರ್ಯತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ತನ್ನ ಸಂಸ್ಥೆಯಲ್ಲಿ ಕಲಿತ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕರೆಸಿ ಸನ್ಮಾನಿಸಿ ಅವರಿಗೆ ನಗದು ಪ್ರೋತ್ಸಾಹದ ನೀಡಿರುವ ಜತೆಗೆ ಭಾರತೀಯ ಸೇನೆಗೆ 3.10 ಚೆಕ್ ನೀಡಿದ ಸುಧಾಕರ ಶೆಟ್ಟಿಯವರ ರಾಷ್ಟ್ರ ಪ್ರೇಮಕ್ಕೆ ಸುನಿಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರಣಾಸಿಯ ಬನಾರಸ್ IMS ನಲ್ಲಿ ಸರ್ಜಿಕಲ್ ಆಂಕೋಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಡಾ.ಗೌತಮ್‌ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಜ್ಞಾನಸುಧಾ ಕಾಲೇಜಿನ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿ ಇಂದು ಮತ್ತೆ ಇದೇ ಕಾಲೇಜಿಗೆ ಅತಿಥಿಯಾಗಿ ಬರುವಂತಾಗಿದ್ದು ನನ್ನ ಭಾಗ್ಯ ಎಂದು ಅವರು, ನಾವು ಹಾಕಿಕೊಂಡ ಗುರಿ ಸಾಧಿಸಲು ಕಠಿಣ ಪರಿಶ್ರಮ ಹಾಗೂ ಅಪಾರ ಶ್ರದ್ಧೆ ಅತ್ಯಂತ ಮುಖ್ಯ ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡತನದ ಬದುಕಿನಲ್ಲಿ ಬಂದ ನಾನು ಕಠಿಣ ಪರಿಶ್ರಮ ಹಾಗೂ ಅಪಾರ ಶ್ರದ್ಧೆಯಿಂದ ಇಂದು ಇಷ್ಟು ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಲು ಸಾಧ್ಯವಾಯಿತು.ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಶಿಕ್ಷಣ ಕಲಿತರೆ ಸಾಲದು ಇದರ ಜತೆಗೆ ತಂದೆತಾಯಿಗಳು ಕಷ್ಟಪಟ್ಟು ಬೆಳೆಸಿದ ಕುರಿತು ಮಕ್ಕಳಿಗೆ ತಿಳಿಹೇಳುವ ಹಾಗೂ ಬದುಕಿನ ಮೌಲ್ಯಗಳು ಹಾಗೂ ದೇಶಾಭಿಮಾನವನ್ನು ಜಾಗೃತಗೊಳಿಸುವುದು ಕೂಡ ಶಿಕ್ಷಣದ ಭಾಗವಾಗಿದೆ ಎಂದರು.
ಈ ಸಂದರ್ಭದಲ್ಲಿ 2024 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಅಡ್ವಾನ್ಸ್ಡ್ ಮೂಲಕ IIT ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, JEE ಮೈನ್ಸ್ ಮೂಲಕ ಎನ್.ಐ.ಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, NEET ಮೂಲಕ ಎಂ.ಬಿ.ಬಿ.ಎಸ್. ಪ್ರವೇಶ ಗಳಿಸಿದ 155 ವಿದ್ಯಾರ್ಥಿಗಳನ್ನು, ಸಿ. ಎ. ಫೌಂಡೇಶನ್‌ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು, ಹಾಗೂ ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಪ್ರತಿ ಎಂ.ಬಿ.ಬಿ.ಎಸ್ ಸೀಟ್‌ಗೆ ರೂ,2 ಸಾವಿರದಂತೆ ಭಾರತೀಯ ಸೆನೆಗೆ ರೂ 3.10 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಒಟ್ಟು 3 ನೇ ಹಂತದಲ್ಲಿ ಇದೀಗ 7,42,500 ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
