Share this news
ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿನ ಧಾರ್ಮಿಕ ಕೇಂದ್ರಗಳ ಸಭಾಭವನಕ್ಕೆ ಟ್ರೇಡ್ ಲೈಸನ್ಸ್ ನೀಡುವ ಕುರಿತು ಅಧಿಕಾರಿಗಳು ನೊಟೀಸ್ ನೀಡಿದ ವಿಚಾರ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು.
ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಡಿ.23ರಂದು ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಾದ ಪ್ರಭಾ ಹಾಗೂ ನಳಿನಿ ಆಚಾರ್ಯ ಈ ವಿಷಯ ಪ್ರಸ್ತಾಪಿಸಿ, ಪುರಸಭೆ ಆಡಳಿತವು ಧಾರ್ಮಿಕ ಕೇಂದ್ರಗಳಿಗೆ ಉದ್ದಿಮೆ ಪರವಾನಿಗೆ ಮಾಡುವಂತೆ ನೊಟೀಸ್ ಜಾರಿಗೊಳಿಸಿದ್ದು ಸರಿಯಲ್ಲ, ಆದ್ದರಿಂದ ನೊಟೀಸ್ ಹಿಂಪಡೆಯಬೇಕೆAದಾಗ, ಈ ಕುರಿತು ಪುರಸಭಾ ಸದಸ್ಯ ಸೋಮನಾಥ ನಾಯ್ಕ್ ಮಾತನಾಡಿ, ಮನೆ ಹಾಗೂ ನೀರಿನ ತೆರಿಗೆ ಹೆಚ್ಚಳ ಮಾಡಿದಾಗ ಆಕ್ಷೇಪ ವ್ಯಕ್ತಪಡಿಸದೇ ಸುಮ್ಮನಿದ್ದವರು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಟ್ರೇಡ್ ಲೈಸನ್ಸ್ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ಪ್ರದೀಪ್ ಮಾತನಾಡಿ, ಅಧಿಕಾರಿಗಳು ಪುರಸಭೆಯ ಆಡಳಿತದ ಗಮನಕ್ಕೆ ತರದೇ ಏಕಪಕ್ಷೀಯವಾಗಿ ನೊಟೀಸ್ ನೀಡಿರುವುದು ತಪ್ಪು, ಅಧಿಕಾರಿಗಳು ಈ ವಿಷಯವನ್ನು ನಿಯಮಾವಳಿ ಪ್ರಕಾರ ಕೌನ್ಸಿಲ್ ಗಮನಕ್ಕೆ ತರಬೇಕೆಂದಾಗ ಇದಕ್ಕೆ ಆಡಳಿತ ಹಾಗೂ ವಿಪಕ್ಷಗಳ ಬಹುತೇಕ ಸದಸ್ಯರು ದನಿಗೂಡಿಸಿದರು. ಈ ವಿಚಾರದ ಕುರಿತು ಪುರಸಭೆ ಮುಖ್ಯಾಧಿಕಾರಿ ರೂಪಾ.ಟಿ ಶೆಟ್ಟಿ ಮಾತನಾಡಿ, ಸರ್ಕಾರದ ನಿಯಮಾವಳಿಯಂತೆ ಧಾರ್ಮಿಕ ಕೇಂದ್ರಗಳ ಸಭಾಭವನಗಳಿಗೆ ಟ್ರೇಡ್ ಲೈಸನ್ಸ್ ಮಾಡಿಸಿಕೊಳ್ಳಲು ನೋಟೀಸ್ ನೀಡಲಾಗಿದೆಯೇ ಹೊರತು ಇದು ಅಧಿಕಾರಿಗಳ ಏಕಪಕ್ಷೀಯ ನಿರ್ಧಾರವಲ್ಲ ಎಂದರು. 
ಧಾರ್ಮಿಕ ಕೇಂದ್ರಗಳಿಗೆ ನೋಟೀಸ್ ನೀಡಿದ ವಿಚಾರದಲ್ಲಿ ಪುರಸಭೆ ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಅಧ್ಯಕ್ಷ ಯೋಗೀಶ್ ದೇವಾಡಿಗ ಹೇಳಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ನೊಟೀಸ್ ನೀಡಿರುವ ಅಧಿಕಾರಿಗಳ ನಿಲುವಿಗೆ ವಿರೋಧ ವ್ಯಕ್ತಪಡಿಸಿದರೆ, ವಿಪಕ್ಷ ಕಾಂಗ್ರೆಸ್ ಸದಸ್ಯ ಅಶ್ಪಕ್ ಅಹಮ್ಮದ್ ಅಧಿಕಾರಿಗಳು ಸರ್ಕಾರದ ನಿಯಮಾವಳಿ ಪ್ರಕಾರ ನೊಟೀಸ್ ನೀಡಿದ್ದಾರೆ ಎಂದಾಗ ಇದಕ್ಕೆ ಪ್ರದೀಪ್ ರಾಣೆ ಆಕ್ಷೇಪಿಸಿ ಒಂದೆಡೆ ಧಾರ್ಮಿಕ ಕೇಂದ್ರಗಳಿಗೆ ನೋಟೀಸ್ ನೀಡಿದ್ದಕ್ಕೆ ಆಕ್ಷೇಪಿಸುತ್ತೀರಿ, ಇನ್ನೊಂದೆಡೆ ನೊಟೀಸ್ ನೀಡಿರುವುದನ್ನು ಸಮರ್ಥಿಸುತ್ತೀರಿ, ನಿಮ್ಮ ದ್ವಂದ್ವ ನಿಲುವು ಯಾಕೆ ಎಂದಾಗ, ಇದಕ್ಕೆ ಉತ್ತರಿಸಿದ ಅಶ್ಪಕ್ ಸರ್ಕಾರದ ನಿಯಮದಂತೆ ನೊಟೀಸ್ ನೀಡಲಾಗಿದೆ ಹಾಗಾಗಿ ಅಧಿಕಾರಿಗಳ ನಡೆಯನ್ನು ಟೀಕಿಸುವುದು ಸರಿಯಲ್ಲ, ಧಾರ್ಮಿಕ ಕೇಂದ್ರಗಳ ತೆರಿಗೆ ವಿಚಾರದಲ್ಲಿ ಮಸೀದಿಗಳ ಧಾರ್ಮಿಕ ಸಭಾಭವನಕ್ಕೂ ನೊಟೀಸ್ ಬಂದಿದೆ, ಆದ್ದರಿಂದ ಧಾರ್ಮಿಕ ಕೇಂದ್ರಗಳಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಪುರಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸೋಣವೆಂದರು.
ಮಿಯ್ಯಾರು ಜೋಡುಕಟ್ಟೆಯ ಬ್ಯಾಗ್ ತಯಾರಿಕಾ ಕಾರ್ಖಾನೆ ಹಾಗೂ ನಕ್ಸಲ್ ನಿಗ್ರಹ ಪಡೆಯ ಕೊಳಚೆ ನೀರನ್ನು ರಾಮ ಸಮುದ್ರಕ್ಕೆ ಬಿಡಲಾಗುತ್ತಿದ್ದು, ಈ ವಿಚಾರ ಗೊತ್ತಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿದ್ದಾರೆ. ಇದರಿಂದ ಕುಡಿಯುವ ನೀರಿನಲ್ಲಿ ಹುಳಗಳು ಉತ್ಪತ್ತಿಯಾಗುತ್ತಿದ್ದು, ಅಧಿಕಾರಿಗಳೇ ಕುಡಿಯುವ ನೀರಿಗೆ ಯಾರಾದರೂ ವಿಷ ಹಾಕ್ತಾರಾ? ಇದರ ಕುರಿತು ಯಾಕೆ ಕ್ರಮ ಜರುಗಿಸಿಲ್ಲ, ಸರ್ಕಾರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಕೋಟ್ಯಾಂತರ ರೂ ಹಣ ಯಾಕೆ ವ್ಯಯಿಸಬೇಕೆಂದು ಅಶ್ಪಕ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪುರಸಭೆಯ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಉತ್ತರಿಸಿ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದಾಗ, ಕೇವಲ ನೊಟೀಸ್ ನೀಡಿದರೆ ಸಾಲದು ನೇರವಾಗಿ ಕ್ರಮ ಜರುಗಿಸಬೇಕೆಂದ ಪುರಸಭಾಧ್ಯಕ್ಷ ಯೊಗೀಶ್  ದೇವಾಡಿಗ, ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೊಳಚೆ ನೀರನ್ನು ರಾಮ ಸಮುದ್ರಕ್ಕೆ ಬಿಡುತ್ತಿದ್ದು, ಈ ಕುರಿತು ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಎನ್‌ಎಫ್ ಘಟಕವನ್ನು ಸ್ಥಳಾಂತರಿಸಬೇಕೆAದು ಆಗ್ರಹಿಸಿದರು.
ಸ್ಥಳ ಬಾಡಿಗೆ ಆಧಾರದಲ್ಲಿ ಅಂಗಡಿ ಪಡೆದವರು ಪುರಸಭೆ ನಿಗದಿಪಡಿಸಿ 80 ಚದರ ಅಡಿ ಹೊರತುಪಡಿಸಿ 500 ಚದರ ಅಡಿಗಳಿಗೆ ವಿಸ್ತರಿಸಿದ್ದು ಮಾತ್ರವಲ್ಲದೇ ದುಪ್ಪಟ್ಟು ಬಾಡಿಗೆಗೆ ಒಳಬಾಡಿಗೆಗೆ ನೀಡಲಾಗುತ್ತಿದೆ ಎಂದು ಪುರಸಭಾ ಸದಸ್ಯ ಸೋಮನಾಥ ನಾಯ್ಕ್ ವಿಷಯ ಪ್ರಸ್ತಾಪಿಸಿದಾಗ, ಇದಕ್ಕೆ ದನಿಗೂಡಿಸಿದ ಪ್ರದೀಪ್ ರಾಣೆ, ಪುರಸಭಾ ವ್ಯಾಪ್ತಿಯ ಸ್ಥಳ ಬಾಡಿಗೆ ನೀಡಿರುವ ಎಲ್ಲಾ ಅಂಗಡಿಗಳ ಸರ್ವೇ ನಡೆಸಬೇಕು ಯಾರ ಹೆಸರಿನಲ್ಲಿದೆ, ಒಳ ಬಾಡಿಗೆ ಪಡೆದ ವಿಚಾರ ಹಾಗೂ ಎಷ್ಟು ಚದರ ಅಡಿ ಎನ್ನುವ ಮಾಹಿತಿ ಸಂಗ್ರಹಿಸಬೇಕೆAದರು. 
ಬೀದಿ ಬದಿ ವ್ಯಾಪಾರಿಗಳಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ, ಆದ್ದರಿಂದ ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಪ್ರತಿಮಾ ರಾಣೆ ಒತ್ತಾಯಿಸಿದಾಗ ಇದಕ್ಕೆ ಹರೀಶ್, ಸೋಮನಾಥ ನಾಯ್ಕ್, ವಿನ್ನಿಬೋಲ್ಡ್ ಮುಂತಾದವರು ದನಿಗೂಡಿಸಿದರು. ಆದರೆ ಬೀದಿಬದಿ ವ್ಯಾಪಾರಕ್ಕೆ ನಾವೇ ಅನುಮತಿಸಿ ಏಕಾಎಕಿ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.
ಇನ್ನುಳಿದಂತೆ ಪೆರ್ವಾಜೆ 2ನೇ ತಿರುವಿನಲ್ಲಿ ವಿದ್ಯುತ್ ಕಂಬ ಮುರಿದಿದ್ದು ದುರಸ್ತಿಪಡಿಸುವಂತೆ ಮಮತಾ ಹಾಗೂ ಕಲ್ಲೊಟ್ಟೆ ಬ್ರಹ್ಮಸ್ಥಾನದ ಬಳಿ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬ ಬದಲಿಸಬೇಕೆಂದು ಶಶಿಕಲಾ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸುಮಾಕೇಶವ್, ಸೀತಾರಾಮ, ರೆಹಮತ್ ಶೇಖ್, ಶೋಭಾ ದೇವಾಡಿಗ ಮುಂತಾದವರು ಮಾತನಾಡಿದರು.

 

Leave a Reply

Your email address will not be published. Required fields are marked *