

ಕಾರ್ಕಳ, ಅ.04: ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ.ಜನರಿಗೆ ಗ್ಯಾರಂಟಿ ಭಾಗ್ಯ ನೀಡಿ ಬಳಿಕ ಅವುಗಳನ್ನು ಬಲವಂತವಾಗಿ ಕಿತ್ತುಕೊಂಡು ಜನರ ಬದುಕನ್ನು ಬೀದಿಗೆ ತಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಅವರು ಕಾರ್ಕಳ ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ,ಕಾಂಗ್ರೆಸ್ ಸರ್ಕಾರ ಜನರ ಬದುಕನ್ನು ಕಿತ್ತುಕೊಂಡು ಸರ್ಕಾರದ ಬೊಕ್ಕಸವನ್ನು ಲೂಟಿ ಹೊಡೆಯುತ್ತಿದೆ.ನಮ್ಮದು ಜನಪರ ಸರ್ಕಾರ ಎನ್ನುತ್ತಿರುವ ಕಾಂಗ್ರೆಸ್,ಉಡುಪಿ ಜಿಲ್ಲೆನಲ್ಲಿ 47470 ಜನರ ಪಿಂಚಣಿ ರದ್ದುಪಡಿಸಿದ್ದು,ಈ ಪೈಕಿ ಕಾರ್ಕಳ ತಾಲೂಕಿನಲ್ಲಿ 10732 ಜನರ ಪಿಂಚಣಿ ರದ್ದುಪಡಿಸಲಾಗುತ್ತಿದೆ. ಕಳೆದ ಹಲವು ತಿಂಗಳಿನಿಂದ ಗೃಹಲಕ್ಷ್ಮೀ ಬಾಕಿ ಹಣ ಬಿಡುಗಡೆಯಾಗಿಲ್ಲ. ಗೃಹ ಲಕ್ಷ್ಮೀ ಪರಿಷ್ಕರಣೆ ನೆಪದಲ್ಲಿ ಬಡವರನ್ನು ಸತಾಯಿಸುತ್ತಿದ್ದು,ಫಲಾನುಭವಿಗಳ ಬಳಿ ಮೊಬೈಲ್ ಇರಬೇಕು, ಮೊಬೈಲ್ ನಂಬರ್ ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕು ಎನ್ನುವ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿ ಪರೋಕ್ಷವಾಗಿ ಗೃಹಲಕ್ಷ್ಮೀ ಯೋಜನೆ ರದ್ದತಿಗೆ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ,ಝೀರೋ ಬ್ಯಾಲೆನ್ಸ್ ಸರ್ಕಾರ ಬಿಜೆಪಿ ಅವಧಿಯಲ್ಲಿ ಮರಳು, ಕಲ್ಲು, ಜಲ್ಲಿ ಸಿಗದೇ ಜನ ಪರದಾಡುತ್ತಿದ್ದಾರೆ.ಕರಾವಳಿಯ ಜ್ವಲಂತ ಸಮಸ್ಯೆಯಾಗಿರುವ 9/11 ಪ್ರಾಧಿಕಾರದ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ ಇದರಿಂದ ಬಡವರ ಮನೆಕಟ್ಟುವ ಕನಸಿಗೆ ಕಾಂಗ್ರೆಸ್ ಕಲ್ಲು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಬಡ ಮಹಿಳೆಯರ ಗೃಹಲಕ್ಷ್ಮೀ ಹಣ ನುಂಗಿದ ಕಾಂಗ್ರೆಸ್ ಸರ್ವರ್ ಸಮಸ್ಯೆಯ ನೆಪಹೇಳುತ್ತಿದೆ. ಆದರೆ ಕೋಟ್ಯಾಂತರ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಹಾಕುತ್ತಿರುವ ಕೇಂದ್ರ ಸರ್ಕಾರಕ್ಕೆ ಸರ್ವರ್ ಸಮಸ್ಯೆಯಿಲ್ಲ.ಉಡುಪಿ ಜಿಲ್ಲೆಯ 1.64 ಲಕ್ಷ ರೈತರಿಗೆ ,ಕಾರ್ಕಳ ತಾಲೂಕಿನ 36 ಸಾವಿರ ಜನ ರೈತರಿಗೆ ವಾರ್ಷಿಕವಾಗಿ ತಲಾ 6 ಸಾವಿರ ಕಿಸಾನ್ ಸಮ್ಮಾನ್ ಹಣ ಪಾವತಿಯಾಗುತ್ತಿದೆ. ಆದರೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಯೋಜನೆಗಳನ್ನು ನೀಡಿ ಇದೀಗ ಬಡವರ ಪಿಂಚಣಿ, ರೇಷನ್ ಕಾರ್ಡ್, ಗೃಹಲಕ್ಷ್ಮೀ ಯೋಜನೆಗಳನ್ನು ಹಂತಹಂತವಾಗಿ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ 32 ಸಾವಿರ ಕೋಟಿ ರೂ ಅನುದಾನ ಘೋಷಣೆ ಮಾಡಿದ್ದು, ಸರ್ಕಾರದ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ಇಟ್ಟುಕೊಂಡು 32,600 ಕೋಟಿ ಅನುದಾನ ಯಾವಾಗ ಕೊಡುತ್ತೀರಿ? ಎಂದು ಪ್ರಶ್ನಿಸಿದರು. ಈಗಾಗಲೇ ಆರ್ಥಿಕ ಇಲಾಖೆ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸಿಎಂ ಗೆ ಎಚ್ಚರಿಸಿದೆ.ಆದರೆ ಮರುದಿನವೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಯೋಜನೆಗಳನ್ನು ಘೋಷಣೆ ಮಾಡಿದ್ದು,32 ಸಾವಿರ ಕೋಟಿ ಪೈಕಿ ತಾಕತ್ತಿದ್ರೆ 300 ಕೋ. ಅನುದಾನ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಉಡುಪಿ ಡಿಸಿ ಕಚೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವಜನರೇ ಕಿರಣ್ ಕುಮಾರ್ ಕೊಡ್ಗಿ,ಗುರುರಾಜ ಗಂಟಿಹೊಳೆ, ಬೋಳ ಪ್ರಭಾಕರ್ ಕಾಮತ್, ನವೀನ್ ಶೆಟ್ಟಿ ಕುತ್ಯಾರು, ಮುಟ್ಲುಪಾಡಿ ಸತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು.





.
.
.
.
.
.
.
.
.
.
.
.
.
.
.
.
.
.
.
.
