
ಕಾರ್ಕಳ,ಆ.10: ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಬಡವರ ಮತ್ತು ನಿರ್ಗತಿಕರ ಕಷ್ಟಕಾರ್ಪಣ್ಯಗಳನ್ನು ಅರಿತುಕೊಂಡು ಅವರ ಬಾಳಿನಲ್ಲಿ ಸಂತೋಷವನ್ನು ತರಲು ಕಾರಣವಾದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅಭಿಪ್ರಾಯಪಟ್ಟರು.
ಅವರು ಇತಿಹಾಸ ಪ್ರಸಿದ್ಧ ಅತ್ತೂರು ಸಂತಲಾರೆನ್ಸರ ಬಸಿಲಿಕದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಲಿಪೀಠದ ಶಂಕುಸ್ಥಾಪನೆ ನೆರವೇರಿಸಿ, ಸಮರ್ಪಣೆಯ ದಶಮಾನೋತ್ಸವದ ಹಾಗೂ ಪಾಲಕ ಸಂತರ ಹಬ್ಬದ ಪ್ರಯುಕ್ತ ಬಲಿ ಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಧರ್ಮಸಭೆಯ ಸಂಪತ್ತನ್ನು ಬಡವರಿಗೆ ಹಾಗೂ ನಿರ್ಗತಕರಿಗೆ ಹಂಚಿದ ಸಂತ ಲಾರೆನ್ಸರು ನಮಗೆಲ್ಲರಿಗೂ ಆದರ್ಶಪ್ರಾಯರು. ಅವರು ಬೋಧಿಸಿದ ಹಾಗೂ ಜೀವಿಸಿದ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಉಡುಪಿ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಬಲಿ ಪೂಜೆಯಲ್ಲಿ ಪ್ರವಚನ ನೀಡಿದರು. ಇದೇ ಸಂರ್ಭ ಕ್ರಿಸ್ತಕೃಪ ಕಟ್ಟಡದ ರಚನೆಯಲ್ಲಿ ಶ್ರಮವಹಿಸಿದ ಹಾಗೂ ಬಾಸಿಲಿಕದಲ್ಲಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿರುವ ವಂ. ಅಲ್ಬನ್ ಡಿಸೋಜಾ, ವಂ. ಜಾರ್ಜ್ ಡಿಸೋಜಾ ಹಾಗೂ ವಂ. ರೋಮನ್ ಮಸ್ಕರೇನಸ್ ಹಾಗೂ ನಿವೃತ್ತ ಮತ್ತು ಹಾಲಿ ಧರ್ಮಧ್ಯಕ್ಷರನ್ನು ಬಾಸಿಲಿಕದ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಅತಿ ವಂ. ಮೊನ್ಸಿಂಜರ್ ಫ್ರಾನ್ಸಿಸ್ ಲುವಿಸ್, ಪಾಲನಾ ಆಯೋಗಗಳ ಸಂಯೋಜಕರಾದ ಶ್ರೀಮತಿ ರೀಟಾ ಲೋಬೊ ಉಪಸ್ಥಿತರಿದ್ದರು.
ಬಲಿ ಪೂಜೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ವಿಕಾರ ಜನರಲ್ ಮೊ. ಫ್ರಾನ್ಸಿಸ್ ಲುವಿಸ್, ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ಟೀವನ್ ಡಿಸೋಜಾ, ಅನೇಕ ಧರ್ಮಗುರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.
ಬಾಸಿಲಿಕದ ನಿರ್ದೇಶಕರಾದ ವಂ. ಆಲ್ಬನ್ ಡಿಸೋಜ ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ ದಶಮಾನೋತ್ಸವ ವರದಿ ವಾಚಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಂದೀಶ್ ಮಥಾಯಸ್ ವಂದನಾರ್ಪಣೆಗೈದರು. ವಿಲ್ಸನ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.




.
.
.
.
.
.
.
.
.
.
.
.
.
.
.
.
.
.
.
.
