
ಕಾರ್ಕಳ,ಜೂ.11: ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಳ್ಳಿ ಕುಕ್ಕುಂದೂರು ಗ್ರಾಮಗಳ ಕಾರ್ಯಕರ್ತರ ಬೂತ್ ಸಂಘಟನಾ ಸಭೆಯು ನಕ್ರೆ ಕುಂಜುಬೆಟ್ಟುವಿನಲ್ಲಿ ನಡೆಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಪ್ರಚಾರಗಿಟ್ಟಿಸಿಕೊಂಡು, ಅಧಿಕಾರಕ್ಕಾಗಿ ಕಚ್ಚಾಟ ಮಾಡಿಕೊಂಡು ಕಾಲ ಕಳೆದದ್ದು ಬಿಟ್ಟರೆ ಬೇರೆ ಯಾವ ಸಾಧನೆಯನ್ನು ಮಾಡಿಲ್ಲ. ಬಡಜನರ ಬದುಕಿಗೆ ಶಾಪವಾಗಿರುವ ಈ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯ, ಸ್ವಜನ ಪಕ್ಷಪಾತ, ಆಡಳಿತ ಯಂತ್ರದ ದುರುಪಯೋಗದ ಕುರಿತು ತಳಮಟ್ಟದಲ್ಲಿ ಧ್ವನಿ ಎತ್ತುವ ಕೆಲಸವಾಗಬೇಕಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ನೀಡದೆ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವ ಸರಕಾರಕ್ಕೆ ಜನಾಕ್ರೋಶದ ಬಿಸಿ ಮುಟ್ಟಿಸುವ ಕೆಲಸವಾಗಬೇಕು ಎಂದರು.
ಮಂಡಲ ಅಧ್ಯಕ್ಷರಾದ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ಸಂಘಟನೆಗೆ ನಮ್ಮ ಮುಂದಿರುವ ಕೆಲವು ವಿಶೇಷ ಚಟುವಟಿಕೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಬೂತಿನ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಪದಾಧಿಕಾರಿಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕು. ಬಿಜೆಪಿಯ ತತ್ವ ಆದರ್ಶಗಳನ್ನು ದೇಶಪ್ರೇಮದ ಜಾಗೃತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದರು. ಸರಕಾರದ ಸವಲತ್ತುಗಳು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮೊದಲದ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಪಕ್ಷದ ಹಿರಿಯರಾದ ಅಂತೋನಿ ಡಿಸೋಜಾ, ಮಂಡಲ ಕಾರ್ಯದರ್ಶಿ ಸುಮಿತ್ ಶೆಟ್ಟಿ, ಶಕ್ತಿ ಕೇಂದ್ರ ಅಧ್ಯಕ್ಷರಾದ ಸಂದೀಪ್ ಅಂಚನ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ಸಾಲಿಯಾನ್, ಪದಾಧಿಕಾರಿಗಳಾದ ರಾಕೇಶ್ ಶೆಟ್ಟಿ, ರವಿಕುಮಾರ್ ಶೆಟ್ಟಿ, ಮೋಹನ್ ದಾಸ್ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


.
.
.
.
.
.
.
.
.
.
.
.
.
.
.
.
.
.
.
.
