
ಕಾರ್ಕಳ,ಜೂ.04: ಕುಂಟಲ್ಪಾಡಿಯ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ದಾರಿ ಮುಚ್ಚಿ ಆವರಣದಲ್ಲಿ ಅಕ್ರಮ ಲೇಔಟ್ ನಿರ್ಮಾಣ ಮಾಡಿ, ಭಕ್ತಾದಿಗಳ ಪ್ರವೇಶಕ್ಕೆ ಅಡ್ಡಿಯುಂಟು ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ದೇವಸ್ಥಾನಕ್ಕೆ ಹೋಗುವ ದಶಕಗಳ ಹಳೆಯ ರಸ್ತೆಯನ್ನು ಅಗೆದು ಇದಕ್ಕೆ ಅಡ್ಡಲಾಗಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ದೇವಸ್ಥಾನದ ಆಸುಪಾಸಿನ ಜಾಗವನ್ನು ಅತಿಕ್ರಮಣ ಮಾಡಲಾಗಿದೆ ಮತ್ತು ಈ ಕಾರ್ಯಕ್ಕಾಗಿ ನೂರಾರು ಮರಗಳನ್ನು ಕಡಿಯಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿರುವವರು ಅನ್ಯ ಧರ್ಮೀಯರಲ್ಲ, ಬದಲಾಗಿ ಹಿಂದೂಗಳೇ ಎಂದು ಗಂಗಾಧರ ಪಣಿಯೂರು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಸದಸ್ಯ ಸುನಿಲ್ ಕೊಟ್ಯಾನ್ ಮಾತನಾಡಿ, ದೇವಸ್ಥಾನದ ರಕ್ಷಣೆಗಾಗಿ ನಾವು ಹೋರಾಡಲು ಸಿದ್ಧ ಎಂದು ಘೋಷಣೆ ಕೂಗಿದರು. ಮೂರು ದಿನಗಳ ಒಳಗಾಗಿ ಅತಿಕ್ರಮಣವನ್ನು ತೆರವುಗೊಳಿಸಿ ದಾರಿ ಮಾಡದಿದ್ದಲ್ಲಿ, ತಡೆಗೋಡೆಗಳನ್ನು ನಾವೇ ಕೆಡವುದಾಗಿ ರತ್ನಾಕರ ಅಮಿನ್ ಎಚ್ಚರಿಕೆ ನೀಡಿದರು. ಮಾಜಿ ಪುರಸಭಾ ಸದಸ್ಯೆ ಮೀನಾಕ್ಷಿ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾಕಾರರು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್, ಕಾರ್ಕಳ ಪುರಸಭೆ ಹಾಗೂ ತಾಲೂಕಾಡಳಿತ ಜಂಟಿಯಾಗಿ ಸರ್ವೇ ನಡೆಸಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಅವರಿಗೂ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.


.
.
.
.
.
.
.
.
.
.
.
.
.
.
.
.
.
.
.
.
