ಕಾರ್ಕಳ: ಮಿಯ್ಯಾರು ಗ್ರಾಮ ಪಂಚಾಯತ್ SLRM ಘಟಕದ ಸಿಬ್ಬಂದಿಗಳಿಗೆ ಕಸ ಸಂಗ್ರಹಣೆ ವೇಳೆ ಸಿಕ್ಕ 2 ಲಕ್ಷ ಮೌಲ್ಯದ ಚಿನ್ನಾಭರಣ,4 ಸಾವಿರ ನಗದು ಹಾಗೂ ಇತರೇ ದಾಖಲೆಗಳನ್ನು ಅದರ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಿಯ್ಯಾರು ಗ್ರಾಮದ ನಿವಾಸಿ ಗಣೇಶ ಶೆಣೈ ಇವರ ತಾಯಿ ನಾಗರತ್ನ ಎ ಶೆಣೈ ಇವರ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನದ ಸರ,4 ಸಾವಿರ ನಗದು ಮತ್ತು ಓಟರ್ ಐಡಿ ಹಾಗೂ ಶಾಲೆಯ ದೃಡೀಕರಣ ಪ್ರತಿ ಇದ್ದ ಚಿಕ್ಕ ಪರ್ಸ್ ಕಳೆದು ಹೋಗಿತ್ತು. ಮಿಯ್ಯಾರು ಗ್ರಾಮ ಪಂಚಾಯತ್ತಿನ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗಳಾದ ಲಲಿತಾ, ಸುನಿತಾ ಮತ್ತು ಕೃಷ್ಣ ಇವರಿಗೆ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ವಿಂಗಡಿಸುವ ಸಂದರ್ಭದಲ್ಲಿ ದೊರೆತಿದ್ದು, ಅವರು ಮಿಯ್ಯಾರು ಗ್ರಾಮ ಪಂಚಾಯತ್ ಗೆ ಒಪ್ಪಿಸಿದ್ದರು. ಪಂಚಾಯತ್ ಸಿಬ್ಬಂದಿಗಳು ವಾರಸುದಾರರಾದ ಗಣೇಶ್ ಶೆಣೈಯವರನ್ನು ಸಂಪರ್ಕಿಸಿ ಚಿನ್ನದ ಸರ ಹಾಗೂ ನಗದು ಇರುವ ಪರ್ಸನ್ನು ಮಿಯ್ಯಾರು ಗ್ರಾಮಪಂಚಾಯತ್ ನ ಕಾರ್ಯದರ್ಶಿಯವರ ಮೂಲಕ ಹಸ್ತಾಂತರಿಸಿದರು. ಮಿಯ್ಯಾರು ಗ್ರಾಮಪಂಚಾಯತ್ ಸ್ವಚ್ಚತಾ ಸಿಬ್ಬಂದಿಗಳ ಈ ಕಾರ್ಯವನ್ನು ಮೆಚ್ಚಿ ಗಣೇಶ ಶೆಣೈ ಅವರ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.