ನಾರಾವಿ: ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ನಾರಾವಿಯ ಗರ್ಭಿಣಿ ಮಹಿಳೆ ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ನಾರಾವಿ ಗ್ರಾಮದ ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯ ಎಂಬವರ ಪತ್ನಿ ಮಧುರಾ (29ವ) ಮೃತಪಟ್ಟ ಬಾಣಂತಿ ಮಹಿಳೆ.ಅವರಿಗೆ ಮೂರುವರೆ ವರ್ಷದ ಗಂಡು ಮಗುವಿದೆ. ಮಧುರಾ ಅವರು ಮತ್ತೆ ಗರ್ಭವತಿಯಾಗಿ ಸಂಪಾಜೆಯ ತನ್ನ ತಾಯಿ ಮನೆಗೆ ತೆರಳಿದ್ದರು. ಹೆರಿಗೆಗಾಗಿ ಜೂ.2ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಜೂ.3ರಂದು ಸಂಜೆ 6.45ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಾತ್ರಿ 9 ಗಂಟೆಗೆ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗುತ್ತಿದೆ ಎಂದು ಅಲ್ಲಿಯ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ, ಅಂಬ್ಯುಲೆನ್ಸ್‌ನಲ್ಲಿ ಮಧುರಾ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ರಾತ್ರಿ 11.30ಕ್ಕೆ ಕರೆತಂದು ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ರಾತ್ರಿ 12.37ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಮಧುರಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಮನೆಯವರು ಅಂಬ್ಯುಲೆನ್ಸ್‌ನಲ್ಲಿ ಶವವನ್ನು ನಾರಾವಿಯ ಪತಿಯ ಮನೆಗೆ ತಂದಿದ್ದರು. ಶವದ ಅಂತಿಮ ಸಂಸ್ಕಾರಕ್ಕೆ ತಯಾರಿಯನ್ನು ನಡೆಸಲಾಗಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸದೇ ಶವವನ್ನು ಮನೆಯವರಿಗೆ ಹಸ್ತಾಂತರಿಸಿದ ಬಗ್ಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಮತ್ತಿತ್ತರ ನಾಯಕರು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ಮೃತ ಮಧುರಾ ಅವರ ಕುಟುಂಬಸ್ಥರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿ, ಶವದ ಮರಣೋತ್ತರ ಪರೀಕ್ಷೆ ನಡೆಸದೆ ಮೃತ ದೇಹವನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದೆ. ಮಧುರಾ ಅವರ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು.
ಈ ವಿಷಯವನ್ನು ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ನಾರಾವಿಯ ಮನೆಗೆ ಬಂದು ಪರಿಶೀಲನೆ ನಡೆಸಿ ಮನೆಯವರ ಜೊತೆ ಮಾತುಕತೆ ನಡೆ ಬಲಿಕ ಮತದೇಹವನು ಪುನಃ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.