ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ರಮೇಶ್(67) ಎಂಬವರು ಸುಮಾರು ಒಂದೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಸಚ್ಚರಿಪೇಟೆಯ ನ್ಯೂ ಸಾಯಿ ಕೃಪಾ ಹೊಟೆಲ್ ಮಾಲೀಕ ಸುರೇಶ್ ಎಂಬಾತನಿಂದ ಆಗಿರುವ ಅವಮಾನಕ್ಕೆ ನೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೊಟೇಲ್ ಕಾರ್ಮಿಕ ರಮೇಶ್ ಅವರು ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್ ಆಧಾರದಲ್ಲಿ ರಮೇಶ್ ಅವರ ಮಗ ಶರತ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು,ಈ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಅವರು ಸುರೇಶ ಅವರ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ತಾನು ದುಡಿದ ಸಂಬಳ ನೀಡುವಂತೆ ಮಾಲೀಕ ಸುರೇಶ್ ಅವರಲ್ಲಿ ಕೇಳಿದಾಗ ಆತ ಸಂಬಳ ನೀಡದೇ ಹೊಟೇಲ್ ಗಿರಾಕಿಗಳ ಎದುರಲ್ಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಪ್ರಕರಣದಿಂದ ಅವಮಾನಕ್ಕೊಳಗಾಗಿ ಹೊಟೇಲ್ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಮೇಶ್ ಅವರು ಏ.7 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಈ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.