
ದಾವಣಗೆರೆ, ಜೂ.24: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪೊಲೀಸರ ಕೈಗೆ ಸೆರೆಸಿಕ್ಕ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನ ವಿಚಾರಣೆ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಮುಂದಾಗಿದ್ದ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾದ 20 ವರ್ಷದ ಶಂಕಿತ ಉಗ್ರ ಸುಹೇಲ್, ತನಿಖಾಧಿಕಾರಿಗಳ ಮುಂದೆ ಭಯಾನಕ ಸಂಚನ್ನು ಒಪ್ಪಿಕೊಂಡಿದ್ದಾನೆ.
ಬಂಧಿತ ಶಂಕಿತ ಉಗ್ರ ಸುಹೇಲ್ ಹರಿಹರ ಪಕ್ಕದ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಸಾಮಾನ್ಯ ಪೇಂಟಿಂಗ್ ಕೆಲಸಗಾರನಾಗಿ ಸೇರಿಕೊಂಡು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ. ಈತನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಈತನ ಮೊಬೈಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ಹೊಂದಿದ್ದ ಸಂಪರ್ಕದ ಪ್ರಮುಖ ಸುಳಿವುಗಳು ಲಭ್ಯವಾಗಿವೆ. ಈತನ ಫೋನ್ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯೊಂದು ‘ರಾಣಾ ಬಾಯ್’ ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಪತ್ತೆಯಾಗಿದೆ.
ತನಿಖೆಯ ವೇಳೆ ಸುಹೇಲ್ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವ ಅಂತರ್ಜಾಲದ ರಹಸ್ಯ ಗುಂಪುಗಳಾದ ‘MEMON & JUTTU- 333’ ಹಾಗೂ ‘RANABHAI 333’ ಗ್ರೂಪ್ಗಳಲ್ಲಿ ಸಕ್ರಿಯ ಸದಸ್ಯನಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ವೃತ್ತಿಪರ ಉಗ್ರರನ್ನು ಹೋಲುವ ರೀತಿಯಲ್ಲಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಪೋಸ್ ನೀಡಿ ತೆಗೆಸಿಕೊಂಡಿದ್ದ ಹಲವಾರು ಫೋಟೋಗಳು ಈತನ ಮೊಬೈಲ್ ಗ್ಯಾಲರಿಯಲ್ಲಿ ಪತ್ತೆಯಾಗಿವೆ.



.
.
.
.
.
.
.
.
.
.
.
.
.
.
.
.
.
.
.
.
