ಬೆಂಗಳೂರು: ಏಪ್ರಿಲ್ 1 ರಿಂದ ಕರ್ನಾಟಕದಾದ್ಯಂತ ಟೋಲ್ ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ತಿಳಿಸಿವೆ. ಇದರೊಂದಿಗೆ ಕರ್ನಾಟಕದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದಂತಾಗಲಿದೆ. ಬೆಲೆ ಏರಿಕೆಯ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದ್ದು, ಪ್ರವಾಸಿ ಕ್ಯಾಬ್ ಇತರೆ ವಾಹನಗಳು ಕೂಡಾ ಬೆಲೆ ಏರಿಕೆ ಮಾಡಲಿದ್ದು, ಇದು ಪ್ರಯಾಣಿಕರಿಗೆ ಹೊರೆಯಾಗಲಿದೆ.
ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಮೊದಲಾದ ಕಡೆ ಟೋಲ್ ದರ ಹೆಚ್ಚಳ ಆಗಲಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಈ ಹೆಚ್ಚಳವು ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಜಾರಿಯಾಗಲಿದೆ. ಟೋಲ್ ಗುತ್ತಿಗೆ ಅವಧಿಯನ್ನು ಆಧರಿಸಿ ದರಗಳು ಬದಲಾಗಲಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ತಿಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.
K