ಉಡುಪಿ: ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಸಹ ಬರುತ್ತಿವೆ. ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ನಗರ ಹಾಗೂ ಗ್ರಾಮೀಣ ಮಟ್ಟದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಹಾಗೂ ಗ್ರಾಮ ಪಂಚಾಯಿತಿ ಗಳು ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕಾಗಿ ಬಜೆಟ್ ನಲ್ಲಿ ಅನುದಾನ ಮಿಸಲಿರಿಸಿ, ಅವುಗಳ ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳು ಪ್ರತೀ ಮೂರು ತಿಂಗಳಿಗೊಮ್ಮೆ ಬೀದಿ ನಾಯಿಗಳ ಗಣತಿ ಕಾರ್ಯ ಕೈಗೊಳ್ಳಬೇಕು. ಒಂದೊಮ್ಮೆ ತಕ್ಷಣದಲ್ಲಿ ಗಣತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶದ ಜನ ಸಂಖ್ಯೆಯ ಶೇ. 2 ರಷ್ಟು ಬೀದಿ ನಾಯಿಗಳು ಇವೆ ಎಂದು ಪರಿಗಣಿಸಿ, ಒಟ್ಟು ನಾಯಿಗಳ ಅರ್ಧದಷ್ಟು ಪ್ರತೀ ವರ್ಷ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿರುವ ನಾಯಿಗಳ ಸಂಖ್ಯೆ ಎಂದು ಪರಿಗಣಿಸಬೇಕು ಎಂದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಆಕ್ರಮಣ ಮಾಡಿ ಕಚ್ಚಿದಾಗ ಪರಿಹಾರವನ್ನು 5000 ರೂ., ಒಂದೊಮ್ಮೆ ವ್ಯಕ್ತಿಯು ಮರಣ ಹೊಂದಿದಲ್ಲಿ 5 ಲಕ್ಷ ರೂ. ಗಳನ್ನು ಸ್ಥಳೀಯ ಸಂಸ್ಥೆಗಳೇ ಸಂತ್ರಸ್ತ ವ್ಯಕ್ತಿಗೆ ಅಥವಾ ವಾರಸುದಾರರಿಗೆ ಪರಿಹಾರ ಹಣವನ್ನು ನಿಯಮಾನುಸಾರ ವಿತರಿಸಬೇಕು ಎಂದರು.
2023-24 ನೇ ಸಾಲಿನಲ್ಲಿ ಎಬಿಸಿ ಕಾರ್ಯಕ್ರಮದ ಅನ್ವಯ ಜಿಲ್ಲೆಯಲ್ಲಿ 1576 ಗಂಡು ಹಾಗೂ 1878 ಹೆಣ್ಣು ಸೇರಿದಂತೆ ಒಟ್ಟು 3454 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ವರೆಗೆ 481 ಗಂಡು, 981 ಹೆಣ್ಣು ಸೇರಿದಂತೆ 1462 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನ ಮಾರ್ಚ್ ಒಳಗಾಗಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಕಳೆದ ವರ್ಷಕ್ಕಿಂತ ಹೆಚ್ಚು ಮಾಡಬೇಕು ಎಂದರು.
ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯನ್ವಯ ನಾಯಿಗಳ ಸಂತಾನೋತ್ಪತ್ತಿ ಮತ್ತು ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ ಅಂಗಡಿ ಚಟುವಟಿಕೆಗಳನ್ನು ನಡೆಸಲು ವ್ಯಕ್ತಿಗಳು ಅಥವಾ ಸಂಸ್ಥೆಗಳು ಕಡ್ಡಾಯವಾಗಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಗ್ರಾಮೀಣ ಮತ್ತು ನಗರ ಮಿತಿಯ ಸ್ಥಳೀಯ ಸಂಸ್ಥೆಗಳಲ್ಲಿ ಪರವಾನಿಗೆಯನ್ನು ಪಡೆಯಬೇಕು ಎಂದರು.
ಕಳೆದ ಸಾಲಿನಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳಲು ಅನುದಾನ ಕಾಯ್ದಿರಿಸಿ, ಟೆಂಡರ್ ಪ್ರಕಟಣೆಯನ್ನು ಕರೆದರೂ ಯಾವುದೇ ಏಜೆನ್ಸಿಗಳು ಬಾರದೇ ಇರುವುದರಿಂದಾಗಿ ಅನುಷ್ಠಾನ ಗೊಳಿಸಲು ಸಾಧ್ಯವಾಗದೇ ಇರುವುದು ಕಂಡುಬಂದಿದೆ ಎಂದ ಅವರು, ಇದರ ಅನುಷ್ಠಾನಕ್ಕಾಗಿ ಸ್ಥಳೀಯ ಪ್ರಾಣಿ ದಯಾ ಸಂಘದ ಸಹಕಾರ ಅಥವಾ ಪಶುಪಾಲನಾ ಇಲಾಖೆಯ ಸಹಕಾರದೊಂದಿಗೆ ಇವುಗಳ ಕಾರ್ಯರೂಪಕ್ಕೆ ಮುಂದಾಗಬೇಕು ಎಂದರು.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕೆರೆಕಟ್ಟೆಯ ಖಾಸಗಿಯವರು ಅಪಘಾತ, ಅನಾರೋಗ್ಯ ಸೇರಿದಂತೆ ಮತ್ತಿತರ ನ್ಯೂನ್ಯತೆ ಹೊಂದಿದ ಪ್ರಾಣಿಗಳನ್ನು ಪಾಲನೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಅವು ಸಮರ್ಪಕ ರೀತಿಯಲ್ಲಿ ಕಾನೂನಿನ ರೀತಿಯಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯವರು ಹಾಗೂ ಪಶು ಪಾಲನಾ ಇಲಾಖೆಯವರು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಮಾತನಾಡಿ, ಸರಕಾರ ಪ್ರಾಣಿಗಳ ಹಿತಕ್ಕಾಗಿ ಅನೇಕ ಕಾನೂನುಗಳು ಹಾಗೂ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಒಂದೊಮ್ಮೆ ಉಲ್ಲಂಘನೆಗೊಂಡಲ್ಲಿ ಕಾನೂನಿನ ಅನ್ವಯ ಕ್ರಮಕ್ಕೆ ಆಸ್ಪದವಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಅವುಗಳಿಗೂ ಸಹ ನಮ್ಮ ಹಾಗೆ ಭೂಮಿಯ ಮೇಲೆ ವಾಸಿಸುವ ಹಕ್ಕು ಇದೆ ಎಂದರು.
ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ ನಾಯಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ ರೆಡ್ಡಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.