ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಬೆಂಗಳೂರು ಮತ್ತು ರಾಯಚೂರಿನ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ನಡೆಸಿ ಇಡೀ ದಿನ ಮಾಹಿತಿ ಕಲೆಹಾಕಿ ಇದೀಗ ಶುಕ್ರವಾರ ಮುಂಜಾನೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿದೆ.
ನಾಗೇಂದ್ರ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದಾಗ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಹಗರಣದ ಆರೋಪ ಕೇಳಿಬಂದಿದ್ದರೂ ನಾಗೇಂದ್ರ ರಾಜೀನಾಮೆ ನೀಡಲು ಒಪ್ಪದಿದ್ದಾಗ ವಿಪಕ್ಷಗಳ ತೀವೃ ಪ್ರತಿಭಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದರು.
ಈಗಾಗಲೇ ಇಡಿ ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧಗಳನ್ನು ಮುಕ್ತಾಯಗೊಳಿಸಿದೆ. ಬೆಂಗಳೂರಿನ ನಾಗೇಂದ್ರ ಮತ್ತು ದದ್ದಲ್ ಅವರ ಮನೆಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಬುಧವಾರ ಬೆಳಿಗ್ಗೆಯಿಂದ, ಇಡಿ ಇಬ್ಬರೂ ಕಾಂಗ್ರೆಸ್ ನಾಯಕರನ್ನು ತಮ್ಮ ಮನೆಗಳಿಂದ ಹೊರಬರದಂತೆ ನಿರ್ಬಂಧಿಸಿದೆ. ವಸಂತನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಗುರುವಾರ ಸಂಜೆಯವರೆಗೂ ಇಡಿ ಅಧಿಕಾರಿಗಳು ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ನಾಗೇಂದ್ರ ಅವರ ಆಪ್ತ ಹರೀಶ್ ಅವರನ್ನು ಗುರುವಾರ ಮತ್ತೆ ವಶಕ್ಕೆ ಪಡೆದು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆದೊಯ್ಯಲಾಯಿತು. ಅಧಿಕಾರಿಗಳು ದದ್ದಲ್ ಅವರ ಆಪ್ತ ಕಾರ್ತಿಕ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.ಬುಧವಾರದ ದಾಳಿಯ ಹಿಂದಿನ ನಿಖರ ಕಾರಣ ಅಸ್ಪಷ್ಟವಾಗಿದ್ದರೂ, ಹಗರಣದ ಬಗ್ಗೆ ತನಿಖೆ ಕೋರಿ ಇಡಿಯಲ್ಲಿ ಎರಡು ದೂರುಗಳು ದಾಖಲಾಗಿವೆ ಎಂಬುದು ಗಮನಾರ್ಹವಾಗಿದೆ.
ಒಟ್ಟಿನಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನದಿAದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವೃ ಮುಜುಗರವಾಗಿದೆ.