
ಕಾರ್ಕಳ,ಜೂ.,16: ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಡಾ. ಜೀವರಾಜ್ ಆಳ್ವಾ ವಿದ್ಯಾರ್ಥಿ ನಿಲಯದ ಉದ್ಘಾಟನೆ ಕಾರ್ಯಕ್ರಮ ಜೂ. 16 ರಂದು ನಡೆಯಿತು.
ಕಾರ್ಕಳ ಜೈನಮಠದ ಸ್ವಸ್ತಿ ಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ದೇವಸ್ಥಾನ ಕಟ್ಟಿ ಪ್ರತಿಷ್ಠೆ ಮಾಡುವುದು ಸುಲಭ ಆದರೆ ಶಾಲೆ ಕಟ್ಟಿ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ಕಷ್ಟದ ಕೆಲಸ. ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಹಗಲಿರುಳು ಶ್ರಮಿಸುತ್ತಾರೆ. ಸಾಲ-ಸೋಲು ಮಾಡಿ ಮಕ್ಕಳನ್ನು ಓದಿಸುತ್ತಾರೆ. ತಂದೆ-ತಾಯಿಯರು ದೇವರ ಸ್ವರೂಪವಾಗಿದ್ದು, ಅವರ ಋಣವನ್ನು ಮಕ್ಕಳು ಎಂದಿಗೂ ಮರೆಯಬಾರದು ಎಂದರು.
ಮಕ್ಕಳು ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಎತ್ತರಕ್ಕೆ ಏರಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ಸಮಾನವಾಗಿ ಅಗತ್ಯವಾಗಿದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿರುವುದರಿಂದ ಅವರಿಗೆ ಉತ್ತಮ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ವಿದ್ಯೆ, ಬುದ್ಧಿಯ ಜೊತೆಗೆ ಸತ್ಪ್ರವೃತ್ತಿ ಮತ್ತು ಕರುಣೆಯ ಗುಣಗಳು ಮಕ್ಕಳಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಬೆಂಗಳೂರು ಅಖಿಲ ಕರ್ನಾಟಕ ಮಕ್ಕಳ ಒಕ್ಕೂಟದ ಕೆ. ಮೋಹನ್ ದೇವ್ ಆಳ್ವಾ ಮಾತನಾಡಿ, ಜೀವನವು ಅತ್ಯಮೂಲ್ಯವಾದುದು. ಅದನ್ನು ಸತ್ಕಾರ್ಯಗಳಿಗೆ ಬಳಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಉತ್ತಮ ಚಿಂತನೆ ಮತ್ತು ಸತ್ಕರ್ಮಗಳಿಂದ ಆರೋಗ್ಯ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಜ್ಞಾನಸುಧಾ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಟೀಕೆ-ಟಿಪ್ಪಣಿಗಳು ಜೀವನದಲ್ಲಿ ಸಹಜವಾದರೂ, ತಂದೆ-ತಾಯಿಯರ ಉತ್ತಮ ಚಿಂತನೆಗಳು ಮತ್ತು ಶಿಕ್ಷಕರ ಮಾರ್ಗದರ್ಶನವೇ ವ್ಯಕ್ತಿಯ ಬದುಕಿಗೆ ಭದ್ರ ಅಡಿಪಾಯವಾಗುತ್ತದೆ ಎಂದರು. ನಮ್ಮನ್ನು ಹೆತ್ತು ಸಾಕಿದ ತಂದೆ,ತಾಯಿಯನ್ನು ಗುರುಗಳನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪುತ್ತಿಗೆ ಶ್ರೀಪತಿ ಭಟ್ ಹಾಗೂ ಕೊರಂಗ್ರಪಾಡಿ ಕುಮಾರಗುರು ತಂತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
